ನವದೆಹಲಿ, ಆ 09(DaijiworldNews/HR):ಭಾವನಾತ್ಮಕ ಹಾಗೂ ಸದೃಢವಾಗಿ ಭಾರತವನ್ನು ನಿರ್ಮಿಸುವ ಕಾರ್ಯ ಆಗಬೇಕು ಮತ್ತು ಈ ಕಾರ್ಯ ಆಂದೋಲನ ರೀತಿಯಲ್ಲಿ ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ.
ಕ್ವಿಟ್ ಇಂಡಿಯಾ ಚಳವಳಿಯ 78ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ತನ್ನ ಫೇಸ್ಬುಕ್ನಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಿಂದ 1947ರ ವರೆಗಿನ ಇತಿಹಾಸದ ಘಟನೆಗಳನ್ನು ಮೆಲುಕು ಹಾಕಿರುವ ಅವರು, ವಸಾಹತುಶಾಹಿ ಕಾಲಘಟ್ಟದ ಘಟನೆಗಳು ಮತ್ತು ವಿದೇಶಿಯರ ಆಕ್ರಮಣದ ಕುರಿತು ಹಂಚಿಕೊಂಡಿದ್ದಾರೆ.
ಹಿಂದೆ ದೇಶವಾಸಿಗಳ ಒಗ್ಗಟ್ಟಿನ ಕೊರತೆಯಿಂದಾಗಿ ದೇಶವು ಸತತವಾಗಿ ಶೋಷಣೆಗೆ ಒಳಗಾಗಬೇಕಾಯಿತು. ನಮ್ಮ ಇತಿಹಾಸದ ಕೆಲವು ಘಟನೆಗಳಿಂದ ಭಾರತೀಯರು ಪಾಠ ಕಲಿಯಬೇಕಾಗಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳುವ ಜೊತೆಗೆ ನಾವೆಲ್ಲರೂ ಭಾರತೀಯರು ಎಂಬ ಅರಿವನ್ನು ಬೆಳೆಸಿಕೊಳ್ಳಬೇಕೆಂದು ಅವರು ಲೇಖನದಲ್ಲಿ ಹೇಳಿದ್ದಾರೆ.
ಇನ್ನು 2022ರಲ್ಲಿ ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತದೆ ಆ ವೇಳೆ ದೇಶದಲ್ಲಿನ ಭ್ರಷ್ಟಾಚಾರ, ಬಡತನ, ಅನಕ್ಷರತೆ, ಅಸಮಾನತೆ ನಿರ್ಮೂಲನೆ ಮಾಡುವುದಾಗಿ ಪ್ರತಿಯೊಬ್ಬ ಭಾರತೀಯರು ಪ್ರತಿಜ್ಞೆ ಮಾಡಬೇಕು ಎಂದು ಲೇಖನದಲ್ಲಿ ತಿಳಿಸಿದ್ದಾರೆ.