ಬೆಂಗಳೂರು, ಆ 09 (DaijiworldNews/PY): ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಶಿವಾಜಿನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊರೊನಾ ದೃಢಪಟ್ಟಿರುವ ಬಗ್ಗೆ ಟ್ವೀಟ್ ಮೂಲಕ ತಿಳಿಸಿರುವ ಅವರು, ಇಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನನ್ನ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳೂ ಜೀವದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹಗಲಿರುಳೂ ಶ್ರಮಿಸುತ್ತಿವೆ ಎಂದಿದ್ದಾರೆ.
ಕೊರೊನ ಕಾಣಿಸಿಕೊಂಡ ಸಮಯದಿಂದಲೂ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡುವ ಸರ್ಕಾರದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ನನಗೆ ಸತ್ವಪರೀಕ್ಷೆಯ ಸಮಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದೇನೆ ಎಂದು ಹೇಳಿದ್ದಾರೆ.
ಆದಷ್ಟೂ ಬೇಗ ಗುಣಮುಖನಾಗಿ ಸಂಕಷ್ಟ ಸಮಯದಲ್ಲಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇತ್ತೀಚಿಗೆ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ವಹಿಸಲು ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಶಿವಾಜಿನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಶೀಘ್ರ ಗುಣಮುಖನಾಗಿ ಬರುವ ವಿಶ್ವಾಸವಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.