ಬೆಂಗಳೂರು, ಆ. 10 (DaijiworldNews/MB) : ಸೋಮವಾರ ಮಧ್ಯಾಹ್ನ 3.30ರ ಗಂಟೆಗೆ ರಾಜ್ಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದ್ದು ಬೇರೆಯವರಿಗೆ ಹೋಲಿಸಿ ಮಕ್ಕಳಿಗೆ ನೋವುಂಟು ಮಾಡದಿರಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಫೇಸ್ಬುಕ್ ಮೂಲಕ ಪೋಷಕರಲ್ಲಿ ಮನವಿ ಮಾಡಿರುವ ಅವರು, ''ಇಂದು, ದಿನಾಂಕ 10-08-2020 ಮಧ್ಯಾಹ್ನ 3.30ರ ಹೊತ್ತಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುತ್ತದೆ. ತಮ್ಮ ಮೊಬೈಲಿಗೆ ಫಲಿತಾಂಶ ಬರುವುದರಿಂದ, ಕೊರೊನಾ ವಾತಾವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂಬುದು ತಮಗೆ ತಿಳಿದಿರಲಿ. ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ. ಅವರನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ. ಅವರು ಯಾವ ಕೋರ್ಸನ್ನು ಆಯ್ಕೆ ಮಾಡಿದ್ದರೂ ಆ ಕೋರ್ಸಿಗೆ ಸೇರಿಸಿ ಮುಂದೆ ಚೆನ್ನಾಗಿ ಓದಲು ಹೇಳಿ ಹಾಗೂ ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿರುತ್ತದೆ. ಮಗು ಮನೆಯ ಬೆಳಕು ಆ ಬೆಳಕು ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಆಶಯ'' ಎಂದು ಹೇಳಿದ್ದಾರೆ.
ಇಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದ್ದು ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಸಂದೇಶದ ಮೂಲಕ ಅಂಕಗಳ ವಿವರ ತಲುಪಲಿದೆ. ಹಾಗೆಯೇ ಇಲಾಖೆಯ ಅಧಿಕೃತ ವೆಬ್ ಸೈಟ್ ಗಳಾದ kseeb.kar.nic.in ಅಥವಾ karresults.nic.in ನಲ್ಲಿಯೂ ಫಲಿತಾಂಶ ನೋಡಬಹುದಾಗಿದೆ.