ಬೆಂಗಳೂರು, ಆ 10(DaijiworldNews/HR): ರಾಜ್ಯದಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅನೇಕ ಜಿಲ್ಲೆಗಳಲ್ಲಿ ಅತೀವೃಷ್ಟಿ ಹಾಗೂ ಪ್ರವಾಹ ಭೀತಿ ಉಂಟಾಗಿದೆ. ಈ ಹಿನ್ನಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಸರ್ಕಾರಗೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ವಿಡಿಯೋ ಕಾನ್ಫೆರೆನ್ಸ್ನಲ್ಲಿ ಭಾಗವಹಿಸಿ, ರಾಜ್ಯದಲ್ಲಿಯಾಗುತ್ತಿರುವ ಮಳೆ ಹಾಗೂ ಪ್ರವಾಹದಲ್ಲಿಉಂಟಾದ ಹಾನಿಗೆ ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಲಿದ್ದಾರೆ.
ರಾಜ್ಯದಲ್ಲಿ ಮಳೆ ಹಾನಿಯಿಂದ ದ. ಕನ್ನಡ, ಉಡುಪಿ, ಚಿಕ್ಕಮಗಳೂರು ಕೊಡಗು, ಧಾರವಾಡ, ಹಾಸನ, ಬೆಳಗಾವಿ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಹಾವೇರಿ ಈ 12 ಜಿಲ್ಲೆಗಳಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದು, ಕೊಡಗಿನಲ್ಲಿ 5 ಜನ ನಾಪತ್ತೆಯಾಗಿದ್ದಾರೆ. ಒಟ್ಟು 23 ಜಾನುವಾರುಗಳು ಮೃತಪಟ್ಟಿದೆ.
ಇನ್ನು ಕಂದಾಯ ಇಲಾಖೆ ಮಾಹಿತಿಯಂತೆ ಕೃಷಿ ಭೂಮಿಗೆ ಸಂಬಂಧಪಟ್ಟಂತೆ 31541.45 ಹೆಕ್ಟೇರ್ ನಲ್ಲಿ ಬೆಳೆದ ಬೆಳೆ ನಾಶವಾಗಿದ್ದು, ತೋಟಗಾರಿಕಾ ಕೃಷಿಯಲ್ಲೇ 34530.55 ಹೆಕ್ಟೇರ್ ಬೆಳೆ ನಾಶಗೊಂಡಿದೆ.ಈವರೆಗೆ ಮಳೆಯಿಂದಾಗಿ ಭಾಗಶಃ 2339 ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.