ನವದೆಹಲಿ, ಆ 10 (DaijiworldNews/PY): ಗೌತಮ ಬುದ್ಧನ ಜನ್ಮಸ್ಥಳ ನೇಪಾಳ. ಈ ವಿಚಾರವಾಗಿ ಯಾವುದೇ ಸಂಶಯವಿಲ್ಲ. ಗೌತಮ ಬುದ್ದ ಹಾಗೂ ಮಹಾತ್ಮ ಗಾಂಧಿ ಶ್ರೇಷ್ಠ ಭಾರತೀಯರು ಇವರಿಬ್ಬರನ್ನೂ ವಿಶ್ವದಾದ್ಯಂತ ಸ್ಮರಿಸಿಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರು ಹೇಳಿದ್ದಾರೆ.
ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಆಯೋಜನೆಯ ವೆಬಿನಾರ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೌತಮ ಬುದ್ದ ಹಾಗೂ ಮಹಾತ್ಮ ಗಾಂಧಿ ಶ್ರೇಷ್ಠ ಭಾರತೀಯರು ಇವರಿಬ್ಬರನ್ನೂ ವಿಶ್ವದಾದ್ಯಂತ ಸ್ಮರಿಸಿಕೊಳ್ಳಲಾಗುತ್ತಿದೆ ಎಂದಿದ್ದರು.
ಜೈಶಂಕರ್ ಅವರ ಈ ಹೇಳಿಕೆಗೆ ನೇಪಾಳ ಆಕ್ಷೇಪ ವ್ಯಕ್ತಪಡಿಸಿದ್ದು, ಗೌತಮ ಬುದ್ಧನ ಜನ್ಮಸ್ಥಳ ನೇಪಾಳ ಎನ್ನುವ ವಿಚಾರದ ಬಗ್ಗೆ ಐತಿಹಾಸಿಕ ಪುರಾವೆಗಳು ಇವೆ ಎಂದು ತಿಳಿಸಿತ್ತು.
ನೇಪಾಳದ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು, ಗೌತಮ ಬುದ್ದನ ವಿಚಾರವಾಗಿ ಜೈಶಂಕರ್ ಅವರು ಹೇಳಿದ್ದರಲ್ಲಿ ಯಾವ ತಪ್ಪಿಲ್ಲ. ಈ ಬಗ್ಗೆ ನೇಪಾಳ ಆಕ್ಷೇಪ ಮಾಡುವಂಥದ್ದು ಏನೂ ಆಗಿಲ್ಲ. ಅಲ್ಲದೇ, ಗೌತಮ ಬುದ್ದ ನೇಪಾಳದ ಲುಂಬಿನಿಯಲ್ಲೇ ಜನಿಸಿರುವ ಬಗ್ಗೆ ಅನುಮಾನ ಇಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು 2014ರಲ್ಲಿ ನೇಪಾಳಕ್ಕೆ ಭೇಟಿ ನೀಡಿ ನೇಪಾಳ ಸಂಸತ್ತಿನಲ್ಲಿ ಮಾತನಾಡಿದ್ದ ಸಂದರ್ಭ, ವಿಶ್ವಕ್ಕೆ ಶಾಂತಿ ಮಂತ್ರವನ್ನು ಸಾರಿರುವ ಬುದ್ದನ ನಾಡು ನೇಪಾಳ ಎಂದು ಹೇಳಿದ್ದರು ಎನ್ನುವುದನ್ನು ನೇಪಾಳ ವಿದೇಶಾಂಗ ಸಚಿವಾಲಯ ತಿಳಿಸಿದೆ.