ನವದೆಹಲಿ, ಆ 10 (DaijiworldNews/PY): ವಿಶ್ವ ಪ್ರವಾಸಿ ನಕ್ಷೆಯಲ್ಲಿ ಅಂಡಮಾನ್-ನಿಕೊಬಾರ್ ಸ್ಥಾನಕ್ಕಾಗಿ ಪ್ರಯತ್ನ ಸಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಚೆನ್ನೈನಿಂದ ಅಂಡಮಾನ್ ಹಾಗೂ ನಿಕೊಬಾರ್ ದ್ವೀಪದವರೆಗೆ ಸಾಗರ ಮೂಲಕ ವೇಗದ ಬ್ರಾಂಡ್ಬ್ಯಾಂಡ್ ಸೇವೆ ಕಲ್ಪಿಸುವ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಸಂಪರ್ಕ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಪ್ರವಾಸಿ ನಕ್ಷೆಯಲ್ಲಿ ಅಂಡಮಾನ್-ನಿಕೊಬಾರ್ ಸ್ಥಾನಕ್ಕಾಗಿ ಪ್ರಯತ್ನ ಸಾಗಿದ್ದು, ಅಲ್ಲಿನ ಜನರಿಗೆ ಹೊಸ ಸೌಲಭ್ಯಗಳ ಮಾತ್ರವಲ್ಲದೇ, ವಿಶ್ವ ಪ್ರವಾಸಿ ನಕ್ಷೆಯಲ್ಲಿ ಅಂಡಮಾನ್ ಹಾಗೂ ನಿಕೊಬಾರ್ಗೆ ಪ್ರಮುಖ ಸ್ಥಾನವನ್ನು ಕೂಡಾ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಅಂಡಮಾನ್ ಮತ್ತು ನಿಕೋಬಾರ್ ಅನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಆಪ್ಟಿಕಲ್ ಫೈಬರ್ ಕೇಬಲ್ ಯೋಜನೆಯು ಬದ್ದತೆಯ ಸಂಕೇತವಾಗಿದೆ ಎಂದು ತಿಳಿಸಿದರು.
ಆನ್ಲೈನ್ ತರಗತಿಗಳು, ಪ್ರವಾಸೋದ್ಯಮ, ಬ್ಯಾಂಕಿಂಗ್, ಶಾಪಿಂಗ್ ಸೇರಿದಂತೆ ಹಲವಾರು ಅವಕಾಶಗಳನ್ನು ಅಂಡಮಾನ್ ಹಾಗೂ ನಿಕೊಬಾರ್ ಸಾವಿರಾರು ಕುಟುಂಬಗಳು ಇದರ ಸೌಲಭ್ಯವನ್ನು ಪಡೆಯಲಿದ್ದಾರೆ. ಅಂಡಮಾನ್ಗೆ ಹೋಗುವ ಪ್ರವಾಸಿಗರು ಈ ಸೌಲಭ್ಯದ ದೊಡ್ಡ ಲಾಭವನ್ನು ಪಡೆದುಕೊಳ್ಳುತ್ತಾರೆ. ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಹೊಸ ಮೂಲಸೌಕರ್ಯಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದರು.
ಮೂರು ದಶಕಗಳ ನಂತರ, ಭಾರತದ ಮೊದಲ ಆಳವಾದ ಕರಡು ಗ್ರೀನ್ಫೀಲ್ಡ್ ಬಂದರು ಪಶ್ಚಿಮ ಕರಾವಳಿಯಲ್ಲಿ ತಾತ್ವಿಕವಾಗಿ ಅನುಮೋದನೆ ಪಡೆದಿದೆ. ಪೂರ್ವ-ಕರಾವಳಿಯಲ್ಲಿ ಒಳ ಬಂದರಿನ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಈಗ ಟ್ರಾನ್ಸ್- ಶಿಪ್ಮೆಂಟ್ ಪೋರ್ಟ್ ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಇದು ಸುಮಾರು 10,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಈ ಬಂದರು ಸಿದ್ಧವಾದ ನಂತರ, ಬೃಹತ್ ಹಡಗುಗಳು ಸಹ ಅಲ್ಲಿಗೆ ಹೋಗಲು ಸಾಧ್ಯವಾಗುತ್ತದೆ. ಯುವಕರಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಇಂದು, ಅಂಡಮಾನ್ನಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ನೀಲಿ ಆರ್ಥಿಕತೆಗೆ ಮುಖ್ಯವಾಗಿದೆ. ಮೀನುಗಾರಿಕೆ, ಜಲಚರ ಸಾಕಣೆಗಳು ನೀಲಿ ಆರ್ಥಿಕತೆಯ ಪ್ರಮುಖ ಭಾಗವಾಗಿದೆ ಎಂದು ತಿಳಿಸಿದರು.
ಅಂಡಮಾನ್ ಮತ್ತು ನಿಕೋಬಾರ್ ವರ್ಷಗಳಲ್ಲಿ ಪೂರ್ಣಗೊಳ್ಳದ ಯೋಜನೆಗಳು ಈಗ ವೇಗವಾಗಿ ಪೂರ್ಣಗೊಳ್ಳುತ್ತಿವೆ ಎನ್ನುವುದನ್ನು ನೀವು ನೋಡುತ್ತಿದ್ದೀರಿ. ಅಂಡಮಾನ್ ಹಾಗೂ ನಿಕೊಬಾರ್ ದ್ವೀಪಗಳಲ್ಲಿಯೂ ಕೂಡಾ ವಾಯು, ಜಲ ಮಾರ್ಗಗಳನ್ನು ಕೂಡ ಅಭಿವೃದ್ದಿಪಡಿಸಲಾಗುತ್ತಿದೆ. ಉತ್ತರ ಹಾಗೂ ಮಧ್ಯ ಅಂಡಮಾನ್ ರಸ್ತೆ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಸೇತುವೆಗಳು ಹಾಗೂ ಎನ್ಎಚ್-4 ಅಗಲೀಕರಣವನ್ನು ಶೀಘ್ರವೇ ಮಾಡಲಾಗುತ್ತಿದೆ. ಇನ್ನು ಮುಂದಿನ ತಿಂಗಳಿನಲ್ಲಿ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಲ್ಲಿ 1,200 ಪ್ರಯಾಣಿಕರನ್ನು ಏಕಕಾಲದಲ್ಲಿ ನಿಭಾಯಿಸುವ ಸಾಮರ್ಥ್ಯದ ಕಾರ್ಯವು ಸಿದ್ದವಾಗಲಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳನ್ನು ಪೋರ್ಟ್ ಲೆಡ್ ಡೆವಲಪ್ಮೆಂಟ್ ಕೇಂದ್ರವಾಗಿ ಅಭಿವೃದ್ಧಿಪಡಿಸಲಿದ್ದೇವೆ ಎಂದು ಪ್ರಧಾನಿ ಹೇಳಿದರು.
ಭಾರತವು ಇಂದು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಸ್ವಾವಲಂಬನೆಯ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ ಜಲಮಾರ್ಗ ಮತ್ತು ಬಂದರುಗಳನ್ನು ಬಲಪಡಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.