ಬೆಂಗಳೂರು, ಆ. 10 (DaijiworldNews/MB) : ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾದ ಪ್ರವಾಹದ ನಷ್ಟದ ಬಗ್ಗೆ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಡಿಯೋ ಕಾನ್ಪೆರೆನ್ಸ್ ಮೂಲಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೊರೊನಾ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸಚಿವರುಗಳಾದ ಬಸವರಾಜ ಬೊಮ್ಮಾಯಿ ಹಾಗೂ ಆರ್.ಅಶೋಕ್ ಪ್ರಧಾನಿ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರವಾಹದ ನಷ್ಟದ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿದ್ದು ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು, ಈಗಲೇ ಮಳೆ ನಿಲ್ಲುವ ಸೂಚನೆಯಿಲ್ಲ. ಇನ್ನೂ ಕೂಡಾ ಅತಿವೃಷ್ಟಿ ಆಗುತ್ತದೆ. ಕೇಂದ್ರ ಸರ್ಕಾರ 310 ಕೋಟಿ ನೀಡಿದ್ದು ಈ ಸಂದರ್ಭದಲ್ಲಿ ಇನ್ನು ಕೂಡಾ ಹೆಚ್ಚುವರಿ ಪರಿಹಾರ ಧನ ಒದಗಿಸಿದರೆ ನಮಗೆ ಮತ್ತಷ್ಟು ಅನುಕೂಲ ಉಂಟಾಗುತ್ತದೆ. ನಾವು ಪಟ್ಟಿ ತಯಾರು ಮಾಡಿದ್ದು ಸದ್ಯಕ್ಕೆ ಒಂದು ಅಂದಾಜಿನ ಪ್ರಕಾರವಾಗಿ ಪರಿಹಾರ ಕೇಳುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಅಧಿಕಾರಿಗಳ ಪ್ರಕಾರವಾಗಿ ಮಳೆಯಿಂದಾಗಿ 2,500 ರಿಂದ 4,000 ಕೋಟಿ ನಷ್ಟ ಉಂಟಾಗಿದ್ದು 80 ಸಾವಿರ ಎಕರೆ ಬೆಳೆ ನಷ್ಟವಾಗಿದೆ. ಬೊಮ್ಮಾಯಿ ಹಾಗೂ ನಾವು ಅಧಿಕಾರಿಗಳೊಂದಿಗೆ ರಾತ್ರಿ ಪೂರ್ತಿ ಮಾಹಿತಿ ಪಡೆದಿದ್ದು ಇದರ ಬಗ್ಗೆ ಪ್ರಧಾನಿ ಅವರಿಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
ಹಾಗೆಯೇ ಕಳೆದ ಬಾರಿಯ ಕೇಂದ್ರದ ಪ್ರವಾಹ ಪರಿಹಾರ ನಿಧಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ ಪರಿಹಾರ ನೀಡುವುದು ಎನ್ಡಿಆರ್ಎಫ್ ನಿಯಮದಂತೆ ಆಗಿದ್ದು ಇದು ದೇಶಕ್ಕೆಯೇ ಅನ್ವಯಿಸುತ್ತದೆ. ಕಳೆದ ಬಾರಿಯೂ ಕೇಂದ್ರ ಎನ್ಡಿಆರ್ಎಫ್ ಅಡಿಯಲ್ಲೇ ಕೇಂದ್ರ ಪರಿಹಾರ ನೀಡಿದೆ. ಈ ಬಾರೀ ಮುಂಜಾಗೃತ ದೃಷ್ಟಿಯಿಂದ ಕೇಂದ್ರದಿಂದ ಈಗಲೇ ಪರಿಹಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದಿದ್ದಾರೆ.