ವಿಶಾಖಪಟ್ಟಣ, ಆ 10 (DaijiworldNews/PY): ಗೋದಾವರಿ ಜಿಲ್ಲೆಯ ಧಾರಾ ಜಗನ್ನಾಧಪುರಂ ಗ್ರಾಮದಲ್ಲಿ ವ್ಯಕ್ತಿಯೋರ್ವ ತನ್ನ ಅಳಿಯನ ಶಿರಚ್ಛೇದ ಮಾಡಿ ರುಂಡ ಸಹಿತ ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ನಡೆದಿದೆ.
ಆರೋಪಿಯನ್ನು ಸತ್ಯನಾರಾಯಣ ಎನ್ನಲಾಗಿದ್ದು, ಮೃತಪಟ್ಟ ವ್ಯಕ್ತಿಯನ್ನು ಲಚ್ಚಣ್ಣ ಎನ್ನಲಾಗಿದೆ.
ಲಚ್ಚಣ್ಣನಿಗೆ ಸತ್ಯನಾರಾಯಣ ಎಂಬಾತನ ಮಗಳೊಂದಿಗೆ ವಿವಾಹವಾಗಿತ್ತು. ಆದರೆ, ಲಚ್ಚಣ್ಣ ಮರುವಿವಾಹವಾಗುವ ಸಲುವಾಗಿ 10 ತಿಂಗಳ ಹಿಂದೆ ಆಕೆಯನ್ನು ಹತ್ಯೆಗೈದಿದ್ದ. ಈ ಕಾರಣದಿಂದ ಸತ್ಯನಾರಾಯಣ ಲಚ್ಚಣ್ಣನನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸತ್ಯನಾರಾಯಣ ತನ್ನ ಮಗಳ ಹತ್ತನೇ ಪುಣ್ಯತಿಥಿಯ ಕಾರಣ ಅಳಿಯ ಲಚ್ಚಣ್ಣನನ್ನು ಮನೆಗೆ ಆಹ್ವಾನಿಸಿದ್ದು, ಈ ಸಂದರ್ಭ ಮನೆಯಲ್ಲಿ ಗಲಾಟೆಯಾಗಿ ಅಳಿಯನನ್ನು ಸತ್ಯನಾರಾಯಣ ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ.
ಲಚ್ಚಣ್ಣನು ಮರುಮದುವೆಯಾಗುವ ಉದ್ದೇಶ ಇಟ್ಟುಕೊಂಡು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬುದಾಗಿ ಸತ್ಯನಾರಾಯಣ ಹೇಳಿದ್ದಾನೆ.