ಅಮ್ರೋಹಾ, ಆ 10 (DaijiworldNews/PY): ಪೋಷಕರ ಇಚ್ಛೆಯ ವಿರುದ್ದವಾಗಿ ನೆರೆಮನೆಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎನ್ನುವ ಕಾರಣಕ್ಕೆ ತಂದೆ ಹಾಗೂ ಇಬ್ಬರು ಸಹೋದರರು ಮರ್ಯಾದಾಗೇಡು ಹತ್ಯೆ ಮಾಡಿದ ಹಿನ್ನೆಲೆ ಜೈಲು ಶಿಕ್ಷೆಗೆ ಒಳಗಾದ ಘಟನೆ ಅಮ್ರೋಹಾ ಜಿಲ್ಲೆಯ ಆದಂಪೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿ 2019ರಲ್ಲಿ ಮನೆಯಿಂದ ಕಾಣೆಯಾಗಿದ್ದಳು. ಈ ಬಗ್ಗೆ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು ಆಕೆಯನ್ನು ಆಕೆಯ ತಂದೆ, ಸಹೋದರ ಹಾಗೂ ಸೋದರ ಸಂಬಂಧಿ ಹತ್ಯೆ ಮಾಡಿ ಮೃತದೇಹವನ್ನು ಗಂಗಾ ನದಿಗೆ ಎಸೆದುದಾಗಿ ತಿಳಿಸಿದ್ದರು.
10 ತಿಂಗಳ ತನಿಖೆಯ ಬಳಿಕ, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ. ಇವರ ತಪ್ಪೊಪ್ಪಿಗೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದಾದ ಎರಡು ದಿನಗಳ ನಂತರ ಆ ಯುವತಿ ಅದೇ ಗ್ರಾಮದಲ್ಲಿ ಪತ್ತೆಯಾಗಿದ್ದಳು. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆ ತನ್ನ ಪತಿಯೊಂದಿಗೆ ಉಳಿದುಕೊಂಡಿದ್ದ ಮನೆಗೆ ಪೊಲೀಸರು ತೆರಳಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಆಕೆ ಅಪ್ರಾಪ್ತಳಾಗಿದ್ದು ಅಲ್ಲದೇ ಗರ್ಭಿಣಿಯಾಗಿದ್ದಳು. ಹಾಗಾಗಿ ಆಕೆ ತನ್ನ ಸ್ನೇಹಿತನೊಂದಿಗೆ ಓಡಿಹೋಗಿದ್ದಳು. ಬಳಿ ಕ ಇಬ್ಬರೂ ವಿವಾಹವಾಗಿದ್ದಾರೆ. ಈ ದಂಪತಿಗಳಿಗೆ ಒಂದು ಗಂಡು ಮಗು ಇದೆ. ಅವರು ಸಂತೋಷವಾಗಿದ್ದಾರೆ ಎಂಬುದಾಗಿ ಪೊಲೀಸರು ಹೇಳಿದ್ದಾರೆ.
ಮೊದಲು ದಂಪತಿ ದೆಹಲಿಯಲ್ಲಿ ವಾಸವಾಗಿದ್ದರು. ಬಳಿಕ ಆ ಗ್ರಾಮಕ್ಕೆ ವಾಪಾಸ್ಸಾಗಿದ್ದರು. ಆದಂಪುರ ಪೊಲೀಸ್ ಠಾಣೆಯ ಆಗಿನ ಅಧಿಕಾರಿಯಾಗಿದ್ದ ಅಶೋಕ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದ್ದು, ಆಂತರಿಕ ತನಿಖೆಗೆ ಆದೇಶ ನೀಡಲಾಗಿದೆ ಎಂಬುದಾಗಿ ಅಮ್ರೋಹಾ ಎಸ್ಪಿ ವಿಪಿನ್ ತಾಡಾ ಹೇಳಿದ್ದಾರೆ. ಮಹಿಳೆಯ ತಂದೆ ಹಾಗೂ ಸಹೋದರರು ಮಾಡಿರುವ ಅಪರಾಧವನ್ನು ಒಪ್ಪಿಕೊಳ್ಳುವಂತೆ ಇನ್ಸ್ಪೆಕ್ಟರ್ ಅಶೋಕ್ ಶರ್ಮಾ ನೇತೃತ್ವದ ಅಂದಿನ ತಂಡವು ಅವರಿಗೆ ಒತ್ತಾಯ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.