ಬೆಂಗಳೂರು, ಆ 10(DaijiworldNews/HR) : ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು ರಾಜ್ಯದಲ್ಲಿ ಈ ಬಾರಿ ಶೇ.71.80 ರಷ್ಟು ಫಲಿತಾಂಶ ಕಂಡುಬಂದಿದೆ.
ಈ ಬಾರಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅವಕಾಶ ಕಲ್ಪಿಸಿದ್ದು, ಇಚ್ಚಿಸುವ ವಿದ್ಯಾರ್ಥಿಗಳು ಆಗಸ್ಟ್ 14 ರಿಂದ ಆಗಸ್ಟ್ 24 ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ನಾಳೆಯಿಂದಲೇ ಪಡೆಯಬಹುದು. ಪೂರಕ ಪರೀಕ್ಷೆಯ ದಿನಾಂಕವನ್ನು ಇನ್ನೆರಡು ದಿನಗಳ ಒಳಗಾಗಿ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಲಿದೆ.
ಇನ್ನು ಮರುಎಣಿಕೆ ಒಂದು ವಿಷಯಕ್ಕೆ ರೂ.150 ಮತ್ತು ಛಾಯಾಪ್ರತಿ ಒಂದು ವಿಷಯಕ್ಕೆ ರೂ.300 ಹಾಗೂ ಮರುಮೌಲ್ಯಮಾಪನ ಒಂದು ವಿಷಯಕ್ಕೆ ರೂ.700 ಪಾವತಿಸಬೇಕಾಗಿದೆ.
ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಛಾಯಾಪ್ರತಿ ಸ್ವೀಕರಿಸಿದ 7ದಿನದೊಳಗಾಗಿ ಮಂಡಳಿಗೆ ಸಲ್ಲಿಸಬೇಕು ಎಂದು ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.
ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಆಯಾ ಶಾಲೆಗಳಿಗೆ ಮರುಎಣಿಕೆ ಮತ್ತು ಮರು ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಕಳುಹಿಸಲಾಗುವುದು.