ನವದೆಹಲಿ, ಆ 10(DaijiworldNews/HR): ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರನ್ನು ರಾಜಸ್ಥಾನ ಕಾಂಗ್ರೆಸ್ ರೆಬೆಲ್ ನಾಯಕ ಸಚಿನ್ ಪೈಲಟ್ ಇಂದುಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ನಿಂದ ದೂರಸರಿದಿದ್ದ ಸಚಿನ್ ಪೈಲಟ್ ಇದೀಗ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿರುವುದು ಅಚ್ಚರಿ ಮೂಡಿಸಿದೆ.
ಇಂದು ಮಧ್ಯಾಹ್ನ ದೆಹಲಿಯಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ಆಗಮಿಸಿ ಸಚಿನ್ ಪೈಲಟ್ ಅವರು, ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಇನ್ನು ಸಚಿನ್ ಪೈಲಟ್ ತಾವು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗಬಹುದು ಮತ್ತು ತಮ್ಮ ಬೆಂಬಲಿಗ ಶಾಸಕರ ಸ್ಥಾನಮಾನದ ಕುರಿತು ಮಹತ್ವದ ಚರ್ಚೆ ನಡೆಸಿರಬಹುದು ಎನ್ನಲಾಗಿದೆ.
ಈ ಹಿಂದೆ ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ಸಚಿನ್ ಪೈಲಟ್ ರನ್ನು ತೆಗೆದುಹಾಕಲಾಗಿತ್ತು. ಹಾಗೂ ಗೆಹ್ಲೂಟ್ ಸರ್ಕಾರದ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಹೀಗಾಗಿ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿತ18 ಶಾಸಕರ ಬಣ ರೆಸಾರ್ಟ್ ಸೇರಿಕೊಂಡು ರಾಜಕೀಯ ತಂತ್ರಗಾರಿಕೆ ಹೆಣೆದಿತ್ತು.