ನವದೆಹಲಿ, ಆ. 11 (DaijiworldNews/MB) : ಕಳೆದ ಒಂದು ತಿಂಗಳ ಹಿಂದೆ ರಾಜಸ್ತಾನದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಈಗ ಅಚ್ಚರಿಯ ಬೆಳವಣಿಗೆಯಲ್ಲಿ ಸುಖಾಂತ್ಯ ಕಂಡಿದೆ. ಸರ್ಕಾರದ ವಿರುದ್ದ ಬಂಡಾಯವೆದ್ದು ಉಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡು, ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದ ಸಚಿನ್ ಪೈಲಟ್ ಅವರು ಮರಳಿ ಕಾಂಗ್ರೆಸ್ಗೆ ಬರಲು ಮುಂದಾಗಿದ್ದಾರೆ.
ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಬಂಡಾಯ ಸಾರಿದ್ದ ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಅವರು ಸೋಮವಾರ ಹಲವು ಗಂಟೆಗಳ ಕಾಲ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾರೊಂದಿಗೆ ಮಾತುಕತೆ ನಡೆಸಿದ್ದು ಈ ಸಂದರ್ಭದಲ್ಲಿ ಮರಳಿ ಪಕ್ಷಕ್ಕೆ ಸೇರಿಕೊಳ್ಳುವ ಮಾತುಕತೆಯು ನಡೆದಿದೆ ಎಂದು ಹೇಳಲಾಗಿದೆ.
ಇನ್ನು ಈ ಚರ್ಚೆ ನಡೆದ ಬಳಿಕ ಕಾಂಗ್ರೆಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸಚಿನ್ ಪೈಲಟ್ ಅವರ ಜೊತೆ ರಾಹುಲ್, ಪ್ರಿಯಾಂಕಾ ಅವರು ಮುಕ್ತ ಮಾತುಕತೆ ನಡೆಸಿದ್ದಾರೆ. ಪಕ್ಷ ಹಾಗೂ ರಾಜಸ್ತಾನ ಸರ್ಕಾರದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ ಎಂದಿದೆ.
ಹಾಗೆಯೇ ಬಂಡಾಯ ಶಾಸಕರು ಹೇಳಿರುವ ವಿಷಯಗಳ ಬಗ್ಗೆ ಗಮನಹರಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ತ್ರಿಸದಸ್ಯ ಸಮಿತಿ ರಚನೆ ಮಾಡಿದ್ದಾರೆಂದು ಪಕ್ಷದ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ರಾಜಸ್ಥಾನ ವಿಧಾನಸಭಾ ಅಧಿವೇಶನ ಆ.14 ರಂದು ನಡೆಯಲಿದ್ದು ಬಹುಮತ ಪರೀಕ್ಷೆ ನಡೆಯುವ ನಿರೀಕ್ಷೆಗಳಿತ್ತು. ಏತನ್ಮಧ್ಯೆ ಸಚಿನ್ ಪೈಲಟ್ ಕಾಂಗ್ರೆಸ್ಗೆ ಮರಳುತ್ತಿರುವುದರಿಂದ ರಾಜಸ್ತಾನ ರಾಜಕೀಯ ಬಿಕ್ಕಟ್ಟು ಸುಖಾಂತ್ಯ ಕಂಡಿದೆ.