ನವದೆಹಲಿ, ಆ. 11 (DaijiworldNews/MB) : ಕೊರೊನಾ ಸೋಂಕು ಪ್ರಮಾಣ ಹೆಚ್ಚಳವಾಗುತ್ತಲೇ ಇರುವ ಕಾರಣದಿಂದಾಗಿ ಹಲವು ರಾಜ್ಯಗಳು ಶಾಲೆಗಳನ್ನು ಮತ್ತೆ ಆರಂಭಿಸಲು ಮನಸು ಮಾಡಿಲ್ಲ. ಆ ಕಾರಣದಿಂದ ಇನ್ನೂ ಕೂಡಾ ಶಾಲೆಗಳ ಆರಂಭಕ್ಕೆ ದಿನಾಂಕ ನಿಗದಿ ಮಾಡಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಸ್ಪಷ್ಟಪಡಿಸಿದೆ.
ಇನ್ನು ಸರ್ಕಾರ ಸೆಪ್ಟೆಂಬರ್ ಕೊನೆಗೆ ಅಥವಾ ಅಕ್ಟೋಬರ್ ವೇಳೆಗೆ ಪ್ರೌಢಶಾಲಾ ಶಿಕ್ಷಣದ ನಂತರ ತರಗತಿಗಳಿಗೆ ಶಾಲೆ ಪ್ರಾರಂಭ ಮಾಡುವ ಚಿಂತನೆ ನಡೆಸಿದ್ದು ಈ ಬಗ್ಗೆಯೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸೆಪ್ಟೆಂಬರ್ ಕೊನೆಯಲ್ಲಿ ಪ್ರೌಢಶಿಕ್ಷಣ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅದರ ಅಂತಿಮ ತೀರ್ಮಾನ ಕೂಡಾ ಇನ್ನಷ್ಟೇ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದೆ.
ಇನ್ನು ಕೊರೊನಾ ಸೋಂಕಿನ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿ ಶಾಲೆಗಳನ್ನು ಮರು ಆರಂಭ ಮಾಡುವ ಬಗ್ಗೆ ಕೇಂದ್ರ ಸರ್ಕಾರವು ಅಂತಿಮ ತೀರ್ಮಾನ ಕೈಗೊಂಡ ಬಳಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಬಳಿಕ ರಾಜ್ಯಗಳು ತಮ್ಮ ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಬಹುದು ಎಂದು ಹೇಳಿರುವ ಕೇಂದ್ರ ಇದೇ ಸಂದರ್ಭದಲ್ಲಿ ಒಂದು ಕೇಂದ್ರಾಡಳಿತ ಪ್ರದೇಶ ಹೊರತುಪಡಿಸಿ ಬೇರೆ ಯಾವುದೇ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳು ಶಾಲೆ ಮರು ಆರಂಭಿಸುವ ಬಗ್ಗೆ ಒಲವು ತೋರಿಸಿಲ್ಲ ಎಂದು ಕೂಡಾ ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.