ಬೆಂಗಳೂರು, ಆ 11 (DaijiworldNews/HR): ಬಿಎಸ್ಎನ್ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದು, ಇದೀಗ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅನಂತ್ ಕುಮಾರ್ ತಮ್ಮ ಅಯೋಗ್ಯತನವನ್ನು ತೋರಿದ್ದಾರೆ ಎಂದು ಟ್ವೀಟ್ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಎಸ್ಎನ್ಎಲ್ ಉದ್ಯೋಗಿಗಳನ್ನು ದೇಶದ್ರೋಹಿಗಳು ಎಂದ ಸಂಸದ ಅನಂತ್ ಕುಮಾರ್ ಅವರು ತಮ್ಮ ಅಯೋಗ್ಯತನವನ್ನು ತೋರಿದ್ದಾರೆ. ಜೊತೆಗೆ ಕೇಂದ್ರ ಬಿಜೆಪಿ ಸರ್ಕಾರ ಎಲ್ಲವನ್ನೂ ಖಾಸಗೀ ಮಾಲೀಕತ್ವಕ್ಕೆ ನೀಡಲು ಹೊರಟಿದೆ ಹಾಗಾಗಿ ಆಡಳಿತ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನೇರವಾಗಿ ಒಪ್ಪಿಕೊಂಡಿದೆ ಎಂದು ವಾಗ್ದಾಳಿ ನಡೆಸಿದೆ.
ಇನ್ನು ಸಮರ್ಪಕ ಸೇವೆ ನೀಡಲು ಬಿಎಸ್ಎನ್ಎಲ್ ಸಂಸ್ಥೆಯ ನೌಕರರಿಂದ ಸಾಧ್ಯವಾಗುತ್ತಿಲ್ಲ ಮತ್ತು ನಮ್ಮ ಸರ್ಕಾರದಿಂದಲೂ ಬಿಎಸ್ಎನ್ಎಲ್ ಸರಿಪಡಿಸಲು ಸಾಧ್ಯವಾಗಿಲ್ಲ. ಈಗಾಗಲೇ 85 ಸಾವಿರ ಅಧಿಕಾರಿಗಳನ್ನು ಮನೆಗೆ ಕಳುಹಿಸಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನಷ್ಟೂ ನೌಕರರನ್ನು ಮನೆಗೆ ಕಳುಹಿಸುತ್ತೇವೆ. ಬಿಎಸ್ಎನ್ಎಲ್ ಸಂಸ್ಥೆಯಲ್ಲಿರುವವರು ದೇಶದ್ರೋಹಿಗಳು, ದೇಶದ್ರೋಹಿಗಳೇ ಆ ಸಂಸ್ಥೆಯಲ್ಲಿ ತುಂಬಿಕೊಂಡಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆ ನೀಡಿದ್ದರು.