ಮಡಿಕೇರಿ, ಆ 11 (DaijiworldNews/HR): ಕೊಡಗು ಜೆಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕಳೆದ ಐದು ದಿನಗಳ ಹಿಂದೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ನಾಪತ್ತೆಯಾಗಿರುವ ತಲಕಾವೇರಿ ಪ್ರಧಾನ ಅರ್ಜಕ ನಾರಾಯಣ ಆಚಾರ್ ಹಾಗೂ ಅವರ ಕುಂಟುಂಭಸ್ಥರು ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿದ್ದರು. ಈಗಾಗಲೇ ನಾರಾಯಣ ಆಚಾರ್ ಅವರ ಅಣ್ಣನ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದವರ ದೇಹಕ್ಕಾಗಿ ಪತ್ತೆಕಾರ್ಯ ನಡೆಯುತ್ತಿರುವಾಗ ಮಣ್ಣಿನಡಿ ಹೂತು ಹೋಗಿದ್ದ ಎರಡು ಕಾರುಗಳು ಪತ್ತೆಯಾಗಿವೆ.
ಇನ್ನು ಮಣ್ಣಿನಡಿಯಲ್ಲಿ ಸಿಲುಕಿರುವವರ ಶೋಧ ಕಾರ್ಯ ಚುರುಕುಗೊಂಡಿದ್ದು, ಮೂರು ಹಿಟಾಚಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಕಾರ್ಯಾಚರಣೆ ವೇಳೆ ಜಖಂ ಗೊಂಡ ,ಎರಡು ಕಾರುಗಳು ಪತ್ತೆಯಾಗಿದ್ದು, ಒಂದು ಡಸ್ಟರ್ ಕಾರು ಮತ್ತೊಂದು ಅಂಬಾಸಡರ್ ಕಾರು ಎಂದು ತಿಳಿದು ಬಂದಿದ್ದು, ಜೆಸಿಬಿ ಯಂತ್ರದ ಮುಖಾಂತರ ತೆಗೆಯಲಾಯಿತು.
ಇನ್ನು ಕಾರ್ಯಾಚರಣೆಯ ವೇಳೆ ವಿದೇಶದಲ್ಲಿ ನೆಲೆಸಿದ್ದ ನಾರಾಯಣಾಚಾರ್ ಅವರ ಪುತ್ರಿಯರು ಸೋಮವಾರ ಸ್ಥಳಕ್ಕೆ ಆಗಮಿಸಿದ್ದಾರೆ. ಅವರ ಮನೆಯ ಕೆಲವು ಪಾತ್ರೆಗಳು, ಪೂಜಾ ಸಾಮಾಗ್ರಿಗಳು ಮತ್ತು ಬಟ್ಟೆಗಳು ಕಾರ್ಯಾಚರಣೆಯ ವೇಳೆ ಸಿಕ್ಕಿವೆ ಎಂದು ತಿಳಿದು ಬಂದಿದೆ.