ಕೊಪ್ಪಳ, ಆ 11 (DaijiworldNews/HR): ಕೊಪ್ಪಳದ ಉದ್ಯಮಿಯೊಬ್ಬರು ತನ್ನ ಪತ್ನಿಯ ಪ್ರತಿಮೆಯೊಂದಿಗೆ ಗೃಹ ಪ್ರವೇಶ ಮಾಡಿದ ಅಪರೂಪದ ಪ್ರೇಮ ಕಥನ ಒಂದು ಬೆಳಕಿಗೆ ಬಂದಿದೆ.
ಮೂರು ವರ್ಷಗಳ ಹಿಂದೆ ತನ್ನ ಮಕ್ಕಳೊಂದಿಗೆ ತಿರುಪತಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಉದ್ಯಮಿ ಶ್ರೀನಿವಾಸ್ ಮೂರ್ತಿ ಪತ್ನಿ ಮಾಧವಿ ಸಾವನ್ನಪ್ಪಿದ್ದರು. ಇದೀಗ ಶ್ರೀನಿವಾಸ ತನ್ನ ಪತ್ನಿ ಇಚ್ಛೆ ಪಟ್ಟಿದ್ದ ಕನಸಿನ ಮನೆ ನಿರ್ಮಿಸಿ ಗೃಹ ಪ್ರವೇಶ ದಂದು ಪತ್ನಿ ಕನಸಿನ ಮನೆಗೆ ಅವರ ಅನುಪಸ್ಥಿತಿ ಇರಬಾರದೆಂದು ಪತ್ನಿಯ ಪ್ರತಿಮೆ ನಿರ್ಮಾಣ ಮಾಡಿಸಿ ಆ ಪ್ರತಿಮೆ ಯೊಂದಿಗೆ ಗೃಹ ಪ್ರವೇಶ ಮಾಡಿದ್ದಾರೆ.
ಆ ಪ್ರತಿಮೆ ನೋಡಲು ಗುಲಾಬಿ ಬಣ್ಣದ ಸೀರೆ ಮತ್ತು ಚಿನ್ನದ ಆಭರಣಗಳನ್ನು ಅಲಂಕರಿಸಿ ಮುಖದ ಮೇಲೆ ಮಂದಹಾಸದೊಂದಿಗೆ ಸೋಫಾದ ಮೇಲೆ ಕುಳಿತು ನೈಜತೆಯಂತೆ ಕಾಣಿಸುತ್ತದೆ. ಗೃಹ ಪ್ರವೇಶದ ವೇಳೆ ಶ್ರೀನಿವಾಸ ಗುಪ್ತಾರ ಪತ್ನಿ ಕಂಡು ಅತಿಥಿಗಳು ಒಮ್ಮೆ ದಾಂಗಾಗಿದ್ದರು. ಈ ಪ್ರತಿಮೆಯನ್ನ ಸಿಲಿಕಾನ್ ಮಟಿರಿಯಲ್ ನಲ್ಲಿ ತಯಾರಿಸಲಾಗಿದೆ. ನೋಡಲು ಜೀವಂತ ಮಹಿಳೆಯಂತೆ ಕಾಣುವ ಈ ಪ್ರತಿಮೆಯನ್ನು ಬೆಂಗಳೂರಿನ ಬೊಂಬೆ ಮನೆ ಕಲಾವಿದರು ರಚಿಸಿದ್ದಾರೆ. ಅದು ಪ್ರತಿಮೆ ಎಂದು ತಿಳಿದ ನಂತರ ಅಥಿತಿಗಳು ಆ ಬೊಂಬೆಯ ಪ್ರತಿರೂಪದ ಜೊತೆ ಫೋಟೊ ತೆಗೆಸಿಕೊಂಡದ್ದೇ ದೊಡ್ಡ ಸಂಭ್ರಮವಾಗಿತ್ತು.
ಇನ್ನು ಗುಪ್ತಾ ಅವರ ಮಕ್ಕಳ ಸಂತೋಷದಿಂದ ಅಮ್ಮ ಜೊತೆಯಲ್ಲೇ ಇದ್ದಾಳೆ ಎನ್ನುವ ಭಾವದಲ್ಲಿ ಗೃಹಪ್ರವೇಶ ಕಾರ್ಯ ಮುಗಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಉದ್ಯಮೀ ಶ್ರೀನಿವಾಸ್ ತಾನು ಆಸೆ ಪಟ್ಟ ಮನೆಯಲ್ಲಿ ಅವಳು ಇರದಿದ್ದರೆ ಹೇಗೆ ಎಂದು ಆಕೆಯ ಪ್ರತಿಮೆ ನಿರ್ಮಿಸಿದ್ದೇನೆ. ಎಲ್ಲಾದರೂ ಆ ಪ್ರತಿಮೆಗೆ ಜೀವ ತುಂಬಲು ಸಾಧ್ಯವಾಗುತ್ತಿದ್ದರೆ ಅದನ್ನೂ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. ಈ ಬೊಂಬೆ ತಯಾರಿಸಲು ಬೊಂಬೆ ಮನೆ ಕಲಾವಿದರು ಒಂದು ವರ್ಷ ತೆಗೆದುಕೊಂಡಿದ್ದಾರೆ.