ನವದೆಹಲಿ, ಆ. 11 (DaijiworldNews/MB) : ಹಿಂದೂ ಅವಿಭಜಿತ ಕುಟುಂಬದ (ಎಚ್ಯುಎಫ್) ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದ್ದು ಅವಿಭಜಿತ ಕುಟುಂಬದ ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಎಂದು ತಿಳಿಸಿದೆ.
2005 ರ ಸೆಪ್ಟೆಂಬರ್ 9 ರಂದು ತಿದ್ದುಪಡಿ ಪ್ರಕಾರ ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿದ್ದರೆ ಮಾತ್ರ ಆಕೆಗೆ ಸಮಾನ ಹಕ್ಕು ಇರುತ್ತದೆ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ತಿದ್ದುಪಡಿ ಮಾಡಿ ಇದೀಗ ಹೊಸ ತೀರ್ಪನ್ನು ನೀಡಿರುವ ಸುಪ್ರೀಂ ಕೋರ್ಟ್ ಕಾನೂನಿನಲ್ಲಿದ್ದ ವಿವಾದಿತ ಪ್ರಶ್ನೆಗಳನ್ನು ಬಗೆಹರಿಸಿ, ಹಿಂದೂ ಉತ್ತರಾಧಿಕಾರ ಕಾಯ್ದೆ 2005 ರ ತಿದ್ದುಪಡಿಯಂತೆ ಹೆಣ್ಣುಮಕ್ಕಳಿಗೆ ಪೋಷಕರ ಆಸ್ತಿಯಲ್ಲಿ ಹಕ್ಕಿದೆ ಎಂದು ತೀರ್ಪು ನೀಡಿದೆ.
ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಂತೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಬೇಕು. ತಂದೆ ಮತ್ತು ಮಗಳು ಇಬ್ಬರೂ ಜೀವಂತವಾಗಿದ್ದರೆ ಮಾತ್ರ ಆಕೆಗೆ ಸಮಾನ ಹಕ್ಕು ಎಂಬಂತಹ ಷರತ್ತುಗಳು ಸರಿಯಲ್ಲ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಅಭಿಪ್ರಾಯಪಟ್ಟಿದ್ದು ತಂದೆ ಅಥವಾ ಮಗಳು ಜೀವಂತವಾಗಿದ್ದರೋ ಇಲ್ಲವೋ ಎಂಬುವುದು ಪರಿಗಣನೆಗೆ ಬರುವುದಿಲ್ಲ. ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಎಂದು ತಿಳಿಸಿದೆ.