ನವದೆಹಲಿ, ಆ 11 (Daijiworld News/MSP): ಕೊರೊನಾ ಸೋಂಕು ಪೀಡಿತರಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನವದೆಹಲಿಯ ಸೇನಾ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಪ್ರಣಬ್ ಮುಖರ್ಜಿ ಅವರಲ್ಲಿ ಮೆದುಳಿನ ಹೆಪ್ಪುಗಟ್ಟುವಿಕೆ ಪತ್ತೆಯಾಗಿದ್ದು, ನಂತರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. "ಶಸ್ತ್ರಚಿಕಿತ್ಸೆಯ ನಂತರ ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್) ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಆಸ್ಪತ್ರೆ ಇಂದು ಬಿಡುಗಡೆ ಮಾಡಿದ ವೈದ್ಯಕೀಯ ಬುಲೆಟಿನ್ ನಲ್ಲಿ ತಿಳಿಸಿದೆ.
84 ವರ್ಷದ ಪ್ರಣಬ್ ಸೋಮವಾರ ಬೆಳಗ್ಗೆ ತಾವೇ ಟ್ವೀಟ್ ಮಾಡಿ ಕೊರೊನಾ ದೃಢಪಟ್ಟ ವಿಷಯವನ್ನು ಪ್ರಕಟಿಸಿದ್ದರು. ''ನಿಗದಿತ ತಪಾಸಣೆಗೆಂದು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಚಿಕಿತ್ಸೆಗೆ ದಾಖಲಾಗಿದ್ದೇನೆ. ಕಳೆದ ಒಂದು ವಾರದಲ್ಲಿ ನನ್ನನ್ನು ಭೇಟಿಯಾದವರು ಐಸೋಲೇಷನ್ಗೆ ತೆರಳುವ ಜತೆಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ,'' ಎಂದು ಟ್ವೀಟ್ ಮಾಡಿದ್ದರು.