ಮಡಿಕೇರಿ, ಆ 11 (DaijiworldNews/HR): ಕಳೆದ ಐದು ದಿನಗಳ ಹಿಂದೆ ಬ್ರಹ್ಮಗಿರಿ ಬೆಟ್ಟ ಕುಸಿತಗೊಂಡು ನಾಪತ್ತೆಯಾಗಿರುವ ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ ಹಾಗೂ ಅವರ ಕುಂಟುಂಭಸ್ಥರು ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿದ್ದರು. ಈಗಾಗಲೇ ನಾರಾಯಣ ಆಚಾರ್ ಅವರ ಅಣ್ಣನ ಮೃತದೇಹ ಪತ್ತೆಯಾಗಿದ್ದು,ಇನ್ನುಳಿದವರ ಪತ್ತೆಯಾಗಿ ಹುಡುಕಾಟ ನಡೆಸುತ್ತಿರುವವಾಗ ಅರ್ಚಕ ಮನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಮಣ್ಣಿನಡಿ ಪತ್ತೆಯಾಗಿವೆ.
ಇದೀಗ ಮಣ್ಣಿನಡಿಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಪತ್ತೆಯಾಗಿದ್ದು, ಬ್ರಹ್ಮಕುಂಡಿಕೆಗೆ ಹಾಕುತ್ತಿದ್ದ ನಾಣ್ಯಗಳನ್ನು ಕೊಂಡೊಯ್ಯುತ್ತಿದ್ದರಾ ಆಚಾರ್ ಎಂಬ ಸಂಶಯ ಕೂಡ ಎದುರಾಗಿದೆ.
ಇನ್ನು ಅರ್ಚಕ ನಾರಾಯಣ ಆಚಾರ್ ಮನೆಯ ಒಂದು ಕೋಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು ಚಿನ್ನ, ನಗದು ಇತ್ತು ಎಂಬ ಮಾಹಿತಿ ಸಿಕ್ಕಿದ್ದು, ಅಚಾರ್ ಮನೆಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು, 100 ಎಕರೆ ಕಾಫಿ ತೋಟದ ಬಗ್ಗೆ ಈಗ ಸ್ಥಳೀಯರಲ್ಲಿ ಅನುಮಾನ ಕಾಡತೊಡಗಿದೆ.
ನಾರಾಯಣ ಆಚಾರ್ ಶ್ರೀಮಂತನಾಗಿದ್ದು, 100 ಎಕರೆ ಕಾಫಿ ತೋಟದ ಒಡೆಯರಾಗಿದ್ದು, ಕ್ವಿಂಟಾಲ್ಗಟ್ಟಲೆ ಕಾಳು ಮೆಣಸು, ಏಲಕ್ಕಿ ಮುಂತಾದ ವಸ್ತುಗಳು ಕೂಡ ಇದೀಗ ಪತ್ತೆಯಾಗಿವೆ.
ಐದು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಆಗಿರಲಿಲ್ಲ. ಕೊಡಗಿನಲ್ಲಿ ಭಾರೀ ಮಳೆಯಾಗಿದ್ದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಇದ್ದ ಅರ್ಚಕರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಸೂಚನೆ ನೀಡಿದ್ದರಂತೆ. ಆದರೆ, ತಾವು ಹುಟ್ಟಿ ಬೆಳೆದ ಊರು, ಬಿಟ್ಟು ಹೋಗುವುದು ಹೇಗೆ ಎಂದು ನಾರಾಯಣ ಆಚಾರ್ಯ ಸುಮ್ಮನಾಗಿದ್ದರಂತೆ.
ಆದರೆ, ಗುರುವಾರ ಬೆಳಗ್ಗೆ ತೋಟದ ರೈಟರ್ ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ಯ ಅವರ ಕುಟುಂಬದ ಎರಡು ಮನೆಗಳು ಅಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ. ಇದರೊಂದಿಗೆ ಕುಟುಂಬದ ಐವರು, 30ಕ್ಕೂ ಹೆಚ್ಚು ಜಾನುವಾರುಗಳು, ಮತ್ತು ಎರಡು ಕಾರುಗಳು ನಾಪತ್ತೆಯಾಗಿವೆ.