ನವದೆಹಲಿ, ಆ. 11 (DaijiworldNews/MB) : ದೇಶದ 10 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೊರೊನಾ ನಿಯಂತ್ರಣ ಕುರಿತಾಗಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ''ಕೊರೊನಾ ಸೋಂಕು ಪರೀಕ್ಷೆ ಪ್ರಮಾಣ ಕಡಿಮೆಯಿದ್ದು ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಕಡೆಗಳಲ್ಲಿ ಕೊರೊನಾ ಪರೀಕ್ಷೆಯನ್ನು ಹೆಚ್ಚಾಗಿ ಮಾಡಬೇಕು'' ಎಂದು ಹೇಳಿದ್ದು ''ಈ 10 ರಾಜ್ಯಗಳಲ್ಲಿ ಸೋಂಕನ್ನು ಸೋಲಿಸಿದರೆ ದೇಶವೂ ಕೊರೊನಾದ ವಿರುದ್ಧ ಗೆಲ್ಲುತ್ತದೆ'' ಎಂದು ಹೇಳಿದ್ದಾರೆ.
ಕೊರೊನಾ ನಿಯಂತ್ರಣದ ಕುರಿತಾಗಿ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್, ಬಿಹಾರ, ಗುಜರಾತ್, ತೆಲಂಗಾಣ, ಉತ್ತರ ಪ್ರದೇಶ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಿದ ಅವರು, ''ಯಾವ ರಾಜ್ಯದಲ್ಲಿ ಸೋಂಕು ಪರೀಕ್ಷೆ ಪ್ರಮಾಣ ಕಡಿಮೆಯಿದ್ದು ಪಾಸಿಟಿವ್ ಪ್ರಕರಣ ಹೆಚ್ಚಾಗಿದೆಯೋ ಅಲ್ಲಿ ಸೋಂಕು ಪರೀಕ್ಷೆಗಳನ್ನು ಹೆಚ್ಚಿಸಬೇಕು. ಮುಖ್ಯವಾಗಿ ಬಿಹಾರ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ತೆಲಂಗಾಣಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕಾಗಿದೆ'' ಎಂದು ಹೇಳಿದ್ದಾರೆ.
''ಇಂದು ದೇಶದಲ್ಲಿ ದಾಖಲಾಗಿರುವ ಒಟ್ಟು ಸೋಂಕು ಪ್ರಕರಣಗಳ ಪೈಕಿ ಶೇ.80 ರಷ್ಟು ಈ ಹತ್ತು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಕೊರೊನಾ ವಿರುದ್ದದ ಹೋರಾಟದಲ್ಲಿ ಈ ಹತ್ತು ರಾಜ್ಯಗಳ ಪಾತ್ರ ಬಹಳ ಮುಖ್ಯವಾಗಿದೆ'' ಎಂದು ಅಭಿಪ್ರಾಯ ಪಟ್ಟಿರುವ ಅವರು ''ಈ ಕಾರಣದಿಂದಾಗಿ ಇಂದು ಈ ಹತ್ತು ರಾಜ್ಯಗಳೊಂದಿಗೆ ಸಭೆ ನಡೆಸಲಾಗಿದೆ. ಇದರಿಂದಾಗಿ ನಾವು ಪರಸ್ಪರ ಕೆಲವೊಂದು ವಿಚಾರಗಳನ್ನು ಕಲಿಯಬಹುದಾಗಿದೆ'' ಎಂದಿದ್ದಾರೆ.
''ಹಾಗೆಯೇ ಸೋಂಕು ಪರೀಕ್ಷೆ ಪ್ರಮಾಣವು ದಿನಕ್ಕೆ 7 ಲಕ್ಷಕ್ಕೆ ಏರಿಕೆಯಾಗಿದ್ದು ನಿರಂತರವಾಗಿ ಪರೀಕ್ಷೆ ಪ್ರಮಾಣ ಹೆಚ್ಚಳವಾಗುತ್ತಿದೆ. ಸಕ್ರಿಯ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿದ್ದು ಗುಣಮುಖರಾಗುವ ಸಂಖ್ಯೆ ಏರಿಕೆ ಕಾಣುತ್ತಿದೆ'' ಎಂದು ಕೂಡಾ ತಿಳಿಸಿದ್ದಾರೆ.
''ಕೊರೊನಾ ಸೋಂಕು ಪ್ರಮಾಣ ಹೆಚ್ಚಿದ್ದ ಹರ್ಯಾಣ, ಉತ್ತರ ಪ್ರದೇಶ, ದೆಹಲಿಯ ಕೆಲವು ಜಿಲ್ಲೆಗಳಲ್ಲಿ ಸಭೆ ನಡೆಸಿ ಕೆಲವೊಂದು ತೀರ್ಮಾನಗಳನ್ನು ಕೈಗೊಂಡ ಬಳಿಕ ಉತ್ತಮ ಫಲಶ್ರುತಿ ಬಂದಿದೆ. ನಮ್ಮ ಎಲ್ಲಾ ರಾಜ್ಯಗಳನ್ನು ಸೋಂಕು ನಿಯಂತ್ರಿಸುವಲ್ಲಿ ಪ್ರಯತ್ನಿಸುತ್ತಿದ್ದು ನಮ್ಮ ಉತ್ಸಾಹ ಭರಿತ ಕಾರ್ಯ ವೈಖರಿಯಿಂದ ಉತ್ತಮ ಫಲಿತಾಂಶ ದೊರೆಯುತ್ತಿದೆ'' ಎಂದು ಈ ಸಂದರ್ಭದಲ್ಲೇ ಹೇಳಿದ್ದಾರೆ.
ಇನ್ನು ಇಂದು ನಡೆದ ಸಭೆಯಲ್ಲಿ ಈ ಹತ್ತು ರಾಜ್ಯಗಳ ಪೈಕಿ ಒಬ್ಬತ್ತು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದು ಕೊರೊನಾದಿಂದ ಗುಣಮುಖರಾಗಿ ಕ್ವಾರಂಟೈನ್ನಲ್ಲಿ ಇರುವ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಭಾಗಿಯಾಗಿಲ್ಲ ಎಂದು ತಿಳಿದು ಬಂದಿದೆ.