ತಲಕಾವೇರಿ, ಆ. 11 (DaijiworldNews/MB) : ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿದ್ದ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ (80) ಅವರ ಮೃತದೇಹವು ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ.
ಮನೆ ಕೊಚ್ಚಿ ಹೋದ ಸ್ಥಳದಿಂದ ದೂರದಲ್ಲಿರುವ ಒಂದು ಪ್ರಪಾತದಲ್ಲಿ ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯ ಪೊಲೀಸರು ಮೃತದೇಹ ನಾರಾಯಣ ಆಚಾರ್ ಅವರದ್ದು ಎಂದು ಗುರುತಿಸಿದ್ದಾರೆ.
ಬೆಟ್ಟ ಕುಸಿತದಿಂದ ನಾಪತ್ತೆಯಾಗಿದ್ದವರ ಪೈಕಿ ಆಗಸ್ಟ್ 8ರಂದು ನಾರಾಯಣ ಆಚಾರ್ ಅವರ ಅಣ್ಣ ಆನಂದ ತೀರ್ಥ ಅವರ ಮೃತದೇಹ ಪತ್ತೆಯಾಗಿತ್ತು. ಇದೀಗ ಅರ್ಚಕ ನಾರಾಯಣ ಆಚಾರ್ ಅವರ ಶವ ಪತ್ತೆಯಾಗಿದ್ದು ಇನ್ನುಳಿದ ಮೂವರು ರವಿ ಕಿರಣ್ ಭಟ್, ಶ್ರೀನಿವಾಸ್ ಹಾಗೂ ಶಾಂತ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸ್ಥಳಕ್ಕೆ ನಾರಾಯಣ ಆಚಾರ್ ಅವರ ಪುತ್ರಿಯರಾದ ನಮಿತಾ, ಶರದಾ ಹಾಗೂ ಮೊಮ್ಮಕ್ಕಳು ಆಗಮಿಸಿದ್ದು ಭಾರೀ ಮಳೆಯ ನಡುವೆ ಶೋಧ ಕಾರ್ಯ ಮುಂದುವರೆದಿದೆ.
ಇನ್ನು ಶೋಧ ಕಾರ್ಯ ನಡೆಸುತ್ತಿರುವ ಸಂದರ್ಭದಲ್ಲಿ ಅರ್ಚಕ ನಾರಾಯಣ ಆಚಾರ್ ಮನೆಯಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಮಣ್ಣಿನಡಿ ಪತ್ತೆಯಾಗಿವೆ.