ನವದೆಹಲಿ, ಆ. 11 (DaijiworldNews/MB) : ಮಣಿಪುರದಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ತಮ್ಮ ರಾಜೀನಾಮೆಯನ್ನು ಮಂಗಳವಾರ ಸ್ಪೀಕರ್ ಅವರಿಗೆ ಸಲ್ಲಿಸಿದ್ದಾರೆ.
ಸೋಮವಾರ ನಡೆದಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಎನ್.ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿತ್ತು. ಈ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ನ ಒಟ್ಟು ಎಂಟು ಶಾಸಕರು ಗೈರಾಗುವ ಮೂಲಕ ಪಕ್ಷದ ವಿಪ್ ಉಲ್ಲಂಘಿಸಿದ್ದು ಈ ಪೈಕಿ ಆರು ಮಂದಿ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಶಾಸಕ ಒ ಹೆನ್ರಿ ಸಿಂಗ್, ಒನಂ ಲುಖೋಯಿ, ಮೊಹಮ್ಮದ್ ಅಬ್ದುಲ್ ನಸೀರ್, ಪಾನೊಂ ಬ್ರೊಜೆನ್, ಗಮ್ ಥಂಗ್ ಹಾಕಿಪ್, ಗಿನ್ ಸುನಾಹ್ ರಾಜೀನಾಮೆ ಸಲ್ಲಿಸಿದವರಾಗಿದ್ದು, ''ಒ ಇಬೊಬಿ ಸಿಂಗ್ ಅವರ ಮುಖಂಡತ್ವದಲ್ಲಿ ನಮಗೆ ವಿಶ್ವಾಸವಿಲ್ಲದ ಕಾರಣ ಕಾಂಗ್ರೆಸ್ ಸರ್ಕಾರ ರಚಿಸಲು ವಿಫಲವಾಗಿದೆ'' ಎಂದು ಹೇಳಿದ್ದಾರೆ.
ಇನ್ನು ಸ್ಪೀಕರ್ ಈ ರಾಜೀನಾಮೆಯನ್ನು ಇನ್ನೂ ಅಂಗೀಕಾರ ಮಾಡಿಲ್ಲ ಎಂದು ತಿಳಿದು ಬಂದಿದ್ದು, ಕಾಂಗ್ರೆಸ್ ಶಾಸಕರು ''ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇವೆ'' ಎಂದು ತಿಳಿಸಿದ್ದಾರೆ.