ತಿರುವನಂತಪುರಂ, ಆ 11 (DaijiworldNews/HR): ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ರಾಜನಲಾದ ಪೆಟ್ಟಿಮುಡಿಯಲ್ಲಿ ನಡೆದ ಭೀಕರ ಭೂಕುಸಿತದಲ್ಲಿ ಅವಶೇಷಗಳಡಿ ಸಿಲುಕಿದದ್ದವರಲ್ಲಿ ಇಂದು ಮೂರು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.
ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಡುಕ್ಕಿಯ ಅಗ್ನಿಶಾಮಕ ದಳ ಮತ್ತು ರಕ್ಷಣಾ ಕಾರ್ಯಪಡೆಯು ಕಾರ್ಯಾಚರಣೆ ನಡೆಸುತ್ತಿವೆ.
ರಕ್ಷಣಾ ಕಾರ್ಯಾಚರಣೆಗೆ ಕೊಟ್ಟಾಯಂ, ತಿರುವನಂತಪುರಂನಿಂದ ಒಂದೊಂದು ರಕ್ಷಣಾ ಪಡೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಇಡುಕ್ಕಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡ ಪ್ರತಿಯೊಬ್ಬರಿಗೂ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಭೂಕುಸಿತದಲ್ಲಿ ಮೃತಪಟ್ಟವರ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡಾ ಸಂತಾಪ ಸೂಚಿಸಿ, ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಭೂ ಕುಸಿತ ಸಂಭವಿಸಿದ ಸ್ಥಳದಲ್ಲಿ 78 ಜನರು ತಂಗಿದ್ದರು, ಅದರಲ್ಲಿ ಇದೀಗ 52 ಶವಗಳು ಪತ್ತೆಯಾಗಿದ್ದು, ಉಳಿದವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.