ಬೆಂಗಳೂರು ಆ 12 (Daijiworld News/MSP): ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೋರ್ವ ಧಾರ್ಮಿಕ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪಿಸಿದ 500ಕ್ಕೂ ಹೆಚ್ಚು ಉದ್ರೀಕ್ತರ ಗುಂಪು ಮಂಗಳವಾರ ತಡರಾತ್ರಿ ಕೆ.ಕಿ ಹಳ್ಳಿ, ಡಿ.ಜೆ ಹಳ್ಳಿ, ಕಾವಲ್ ಬೈರಸಂದ್ರದಲ್ಲಿ ದಾಂಧಲೆ, ಗಲಭೆ ನಡೆಸಿ ವಾಹನ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
ಗಲಭೆಕೋರರ ಗುಂಪನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು ಓರ್ವನಿಗೆ ಗುಂಡು ತಗುಲಿ ಸ್ಥಳದಲ್ಲಿಯೇ ಮೃತಪಟ್ಟು ಮತ್ತೆ ಮೂವರಿಗೆ ಗಾಯಗೊಂಡಿರುವ ಘಟನೆ ಡಿ.ಜೆಹಳ್ಳಿಯಲ್ಲಿ ನಡೆದಿದೆ.
ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಫೇಸ್ ಬುಕ್ ಪೋಸ್ಟ್ ಮಾಡಿದ್ದ ಎನ್ನಲಾದ ಆರೋಪಿ ನವೀನ್ ನನ್ನು ಪೊಲೀಸರು ಮಂಗಳವಾರ ರಾತ್ರಿಯೇ ವಶಕ್ಕೆ ಪಡೆದುಕೊಂಡಿದ್ದಾರೆ.
ಗಲಭೆಕೋರರ ಗುಂಪು, ಸಾರ್ವಜನಿಕರ ವಾಹನ, ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಹಾಗೂ ಕೆಎಸ್ಆರ್ ಪಿ ವಾಹನಗಳಿಗೆ ಹಾಗೂ ಪೊಲೀಸ್ ಕ್ವಾಟ್ರಸ್ ಬಳಿ ಬೆಂಕಿ ಹಚ್ಚಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ವರದಿಗೆಂದು ಹೋಗಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಲಾಗಿದ್ದು ಖಾಸಗಿ ಚಾನೆಲ್ ಗಳ ವರದಿಗಾರರು ಹಾಗೂ ಕ್ಯಾಮೆರಾಮೆನ್ ಗಳ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಎಸಿಪಿ, ಡಿಸಿಪಿ, ಹಾಗೂ ಇನ್ಸ್ ಪೆಕ್ಟರ್ ಗಳಿಗೂ ಗಾಯಗಳಾಗಿದೆ. ಘಟನೆ ನಿಯಂತ್ರಿಸಲು ಅನಿವಾರ್ಯವಾಗಿ ಪೈರಿಂಗ್ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
ಗಲಭೆ ಪ್ರಕರಣದ ತನಿಖೆ ಜವಾಬ್ದಾರಿಯನ್ನು ಸಿಸಿಬಿ ವಹಿಸಲಾಗಿದ್ದು, ಸಿಸಿಬಿಯ ವಿಶೇಷ ತಂಡಗಳು, ಮಂಗಳವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.. ಈಗಾಗಲೇ 30 ಮಂದಿಯನ್ನು ಬಂಧಿಸಲಾಗಿದ್ದು, ಮತ್ತಷ್ಟು ಮಂದಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.