ಮುಂಬೈ, ಆ. 12 (DaijiworldNews/MB) : ಮುನ್ನಭಾಯಿ ಎಂಬಿಬಿಎಸ್ ಖ್ಯಾತಿಯ ನಟ ಸಂಜಯ್ ದತ್ ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಾಲಿವುಡ್ ವಹಿವಾಟು ವಿಶ್ಲೇಷಕ ಕೋಮಲ್ ನಹ್ತಾ ಅವರು, ''ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ. ಅವರ ಶೀಘ್ರ ಚೇತರಿಕೆಗಾಗಿ ನಾವು ಪ್ರಾರ್ಥಿಸೋಣ'' ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಕೆಲವು ಮಾಧ್ಯಮಗಳು ಸಂಜಯ್ ದತ್ ಅವರು 3ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದೆ.
ಅವರು ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು ಬಳಿಕ ಕೊರೊನಾ ಮಾರ್ಗಸೂಚಿಯಂತೆ ಸೋಂಕು ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಆಗಿತ್ತು. ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಹಾಗೆಯೇ ಸೋಮವಾರ ನಾನು ಕೆಲವು ವೈದ್ಯಕೀಯ ಚಿಕಿತ್ಸೆಗಾಗಿ ನನ್ನ ವೃತ್ತಿಯಿಂದ ಸ್ವಲ್ಪ ಸಮಯ ಬಿಡುವು ಪಡೆಯುತ್ತೇನೆ. ನನ್ನೊಂದಿಗೆ ನನ್ನ ಕುಟುಂಬ ಹಾಗೂ ಸ್ನೇಹಿತರು ಇದ್ದಾರೆ. ಯಾರೂ ಕೂಡಾ ಊಹಾಪೋಹದತ್ತ ಗಮನ ಹರಿಸಬೇಡಿ. ನಿಮ್ಮ ಪ್ರೀತಿ ಮತ್ತ ಆಶೀರ್ವಾದದಿಂದ ಶೀಘ್ರವೇ ಮರಳುತ್ತೇನೆ ಎಂದಿದ್ದರು. ಇದರ ಬೆನ್ನಲ್ಲೇ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ ಎಂದೂ ಕೂಡಾ ಹೇಳಲಾಗುತ್ತಿದೆ.