ಬೆಂಗಳೂರು, ಆ 12 (Daijiworld News/MSP): ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕರೊಬ್ಬರು ಮುಸ್ಲಿಂ ವಿರೋಧಿ ಪೋಸ್ಟ್ ಮಾಡಿದ್ದರು ಎಂಬ ಕಾರಣಕ್ಕೆ ಮಂಗಳವಾರ ತಡರಾತ್ರಿ ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮತ್ತು ಕಾವಲ್ಭೈರಸಂದ್ರದಲ್ಲಿ ಗಲಭೆ ನಡೆದಿದ್ದು , ಇದನ್ನು ತಹಬದಿಗೆ ತರಲು ಯತ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ಪೊಲೀಸರು ನಡೆಸಿದ ಪೈರಿಂಗ್ ಗೆ ಮೂವರು ಬಲಿಯಾಗಿದ್ದಾರೆ.
ಇನ್ನೊಂದೆಡೆ ಈ ಗಲಭೆ ಪೂರ್ವ ನಿಯೋಜಿತವೇ ಎಂಬ ಅನುಮಾನ ವ್ಯಕ್ತವಾಗ ತೊಡಗಿದ್ದು ವ್ಯವಸ್ಥಿತಿ ರೀತಿಯಲ್ಲಿ ಸಂಚು ರೂಪಿಸಿ ದಾಂಧಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಮನೆ , ವಾಹನಗಳಿಗೆ ಬೆಂಕಿ, ಗಲಭೆಕೋರರ ಕ್ರೌರ್ಯ, ಕಿಡಿಗೇಡಿಗಳ ಬಳಿ ಇದ್ದ ಮಾರಾಕಾಸ್ತ್ರಗಳು, ಗಾಂಜಾ ಮತ್ತಿನಲಿದ್ದ ದುಷ್ಕರ್ಮಿಗಳು, ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಇವೆಲ್ಲವನ್ನು ಗಮನಿಸಿದರೆ ಈ ಗಲಭೆ ಪೂರ್ವ ನಿಯೋಜಿತ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನು ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೂ ಗಲಭೆಗೆ ಸಂಬಂಧಿಸಿದಂತೆ 110 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತೆ ಪೋಸ್ಟ್ ಮಾಡಿದ್ದ ಎನ್ನಲಾದ ಅಖಂಡ ಶ್ರೀನಿವಾಸ್ ಮೂರ್ತಿ ಸಂಬಂಧಿಕ ನವೀನ್ ನನ್ನು ಕೂಡಾ ಪೊಲೀಸರು ನಿನ್ನೆಯೇ ದಸ್ತಗಿರಿ ಮಾಡಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಇನ್ನಷ್ಟು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. 10ಕ್ಕೂ ಹೆಚ್ಚು ಜನರು ಗುಂಡೇಟಿನಿಂದ ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಕೇಸ್ಗಳನ್ನು ದಾಖಲಿಸಿಕೊಳ್ಳಲಾಗಿದೆ.