ಬೆಂಗಳೂರು, ಆ 12 (DaijiworldNews/PY): ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಶಾಸಕ ಅಖಂಡ ಶ್ರೀನಿವಾಸ ಅವರ ಮನೆ ಹಾಗು ಪೋಲೀಸ್ ಠಾಣೆ ಮೇಲೆ ದಾಳಿ, ಗಲಭೆ ನಡೆಸಿರುವುದು ಖಂಡನೀಯ. ಇಂತಹ ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಡಿ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಶಾಸಕ ಅಖಂಡ ಶ್ರೀನಿವಾಸ ಅವರ ಮನೆ ಹಾಗು ಪೋಲೀಸ್ ಠಾಣೆ ಮೇಲೆ ದಾಳಿ, ಗಲಭೆ ನಡೆಸಿರುವುದು ಖಂಡನೀಯ. ಈಗಾಗಲೇ ದುಷ್ಕರ್ಮಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದ್ದು ಸರ್ಕಾರ ದಾಂಧಲೆ ಹತ್ತಿಕ್ಕಲು ಎಲ್ಲ ರೀತಿಯ ಕ್ರಮ ಕೈಗೊಂಡಿದೆ
ರಾತ್ರಿ ನಡೆದ ಗಲಭೆಯಲ್ಲಿ ಪತ್ರಕರ್ತರು, ಪೋಲೀಸರು, ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಅಕ್ಷಮ್ಯ. ಇಂತಹ ಪ್ರಚೋದನೆ, ಪುಂಡಾಟಗಳನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ನಿಶ್ಚಿತ. ಜನರು ಈ ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸಬೇಕೆಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿಯೋರ್ವ ಧಾರ್ಮಿಕ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪಿಸಿದ 500ಕ್ಕೂ ಹೆಚ್ಚು ಉದ್ರೀಕ್ತರ ಗುಂಪು ಆ.11ರ ಮಂಗಳವಾರ ತಡರಾತ್ರಿ ಕೆ.ಕಿ ಹಳ್ಳಿ, ಡಿ.ಜೆ ಹಳ್ಳಿ, ಕಾವಲ್ ಬೈರಸಂದ್ರದಲ್ಲಿ ದಾಂಧಲೆ, ಗಲಭೆ ನಡೆಸಿ ವಾಹನ ಮನೆಗಳಿಗೆ ಬೆಂಕಿ ಹಚ್ಚಿದ್ದರು.