ನವದೆಹಲಿ, ಆ. 12 (DaijiworldNews/MB) : ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿರುವ ಪ್ರಣಬ್ ಮುಖರ್ಜಿಯವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ದೇವರು ತಂದೆಗೆ ಒಳಿತು ಮಾಡಲಿ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕಳೆದ ವರ್ಷ ಆಗಸ್ಟ್ 8 ರಂದು ನನ್ನ ತಂದೆ ಭಾರತ ರತ್ನವನ್ನು ಸ್ವೀಕರಿಸಿದ್ದು ಆ ದಿನ ನನಗೆ ಸಂತೋಷದ ದಿನವಾಗಿದೆ. ನಿಖರವಾಗಿ ಒಂದು ವರ್ಷದ ನಂತರ ಆಗಸ್ಟ್ 10 ರಂದು ಅವರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ದೇವರು ತಂದೆಗೆ ಒಳಿತು ಮಾಡಲಿ. ಜೀವನಲ್ಲಿ ಸಂತೋಷ ಹಾಗೂ ದುಃಖವನ್ನು ಸಮಾನವಾಗಿ ಸ್ವೀಕರಿಸುವಂತಹ ಶಕ್ತಿಯನ್ನು ದೇವರು ನನಗೆ ನೀಡಬೇಕು. ಎಲ್ಲರ ಕಾಳಜಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ'' ಎಂದು ಹೇಳಿದ್ದಾರೆ.
84 ವರ್ಷದ ಪ್ರಣಬ್ ಮುಖರ್ಜಿ ಅವರಿಗೆ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದರಿಂದ ಸೋಮವಾರ ಸೇನೆಯ ರೀಸರ್ಚ್ ಆ್ಯಂಡ್ ರೆಫರಲ್ (ಆರ್ಆ್ಯಂಡ್ಆರ್) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅದಕ್ಕೂ ಮುನ್ನ ಕೊರೊನಾ ಪರೀಕ್ಷೆ ಮಾಡಿದಾಗ ಪಾಸಿಟಿವ್ ದೃಢಪಟ್ಟಿತ್ತು.