ಬೆಂಗಳೂರು, ಆ. 12 (DaijiworldNews/MB) : ನನ್ನ ಹೇಳಿಕೆಯನ್ನು ಹಿಂದೂ ವಿರೋಧಿ ಎನ್ನುವಂತೆ ತಿರುಚಲಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಗಲಭೆಯನ್ನು ವಿರೋಧಿಸಿದ್ದ ಅವರು ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಹಾಗೆಯೇ ಸರ್ಕಾರಕ್ಕೆ ಶಾಂತಿ ಸ್ಥಾಪನೆಯ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದ್ದರು.
ಇದೀಗ ಈ ಹೇಳಿಕೆಗಳನ್ನು ಹಿಂದೂ ವಿರೋಧಿ ಎಂಬಂತೆ ತಿರುಚಲಾಗುತ್ತಿದೆ ಎಂದು ಆರೋಪಿಸಿ ಟ್ವೀಟ್ ಮಾಡಿರುವ ಅವರು, ''ಹಿಂದು-ಮುಸ್ಲಿಮರು ಕೂಡಿ ಶಾಂತಿ ಸ್ಥಾಪನೆಗೆ ಮುಂದಾಗಬೇಕೆಂಬ ನನ್ನ ಹೇಳಿಕೆಯನ್ನು ಹಿಂದೂ ವಿರೋಧಿ ಎನ್ನುವಂತೆ ತಿರುಚಲಾಗುತ್ತಿದೆ. ಮುಸ್ಲಿಮ್ ಗಲಭೆಕೋರರಿಗೆ ಮುಸ್ಲಿಮ್ ಹಿರಿಯರು, ಗಲಭೆಗೆ ಪ್ರಚೋದಿಸಿದ್ದ ಹಿಂದೂ ಯುವಕ ನವೀನ್ಗೆ ಹಿಂದೂ ಹಿರಿಯರೇ ಬುದ್ದಿ ಹೇಳಬೇಕಲ್ಲಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ?'' ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಕಾವಲಭೈರಸಂದ್ರದಲ್ಲಿ ಗಲಭೆ ವರದಿ ಮಾಡಲು ಹೋಗಿರುವ ಮಾಧ್ಯಮ ಮಿತ್ರರ ಮೇಲೆ ದುಷ್ಕರ್ಮಿಗಳು ನಡೆಸಿರುವ ಹಲ್ಲೆ ಖಂಡನೀಯ. ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸಿ, ಪತ್ರಕರ್ತರು ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದ್ದಾರೆ.
ಇನ್ನು ಸಿದ್ದರಾಮಯ್ಯನವರು ಈ ಘಟನೆಯನ್ನು ಖಂಡಿಸಿದ ಮಾಡಿದ್ದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಸಂಸದ ಪ್ರತಾಪ್ ಸಿಂಹರವರು, ಎಸ್ಡಿಪಿಯ, ಕೆಎಫ್ಡಿ ಪುಂಡರ ಕ್ರಿಮಿನಲ್ ಕೇಸು ವಾಪಾಸ್ ಪಡೆದದ್ದು ತಪ್ಪೆಂದು ಈಗಲಾದರೂ ತಿಳಿಯಿತೆ? ಎಂದು ಕೇಳಿದ್ದರು.