ಬೆಂಗಳೂರು, ಆ. 12 (DaijiworldNews/MB) : ತಾನು ಹುಟ್ಟು ಬೆಳೆದ ಮನೆಯನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಕ್ಕೆ ಪುಲಕೇಶಿನಗರ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಣ್ಣೀರಿಟ್ಟಿದ್ದು ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರು ಬುಧವಾರ ಈ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀನಿವಾಸಮೂರ್ತಿ ಅವರು ತಾನು ಹುಟ್ಟಿ ಬೆಳೆದ ಮನೆಗೆ ಬೆಂಕಿ ಇಟ್ಟಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಸರ್ಕಾರ ಸಿಬಿಐ, ಸಿಐಡಿ ಯಾವುದಾದರೊಂದು ತನಿಖೆಯನ್ನು ಶೀಘ್ರವೇ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಹಾಗೆಯೇ ತಮಗೆ ಹಾಗೂ ಕುಟುಂಬದ ಸದಸ್ಯರಿಗೆ ಭದ್ರತೆ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿರುವ ಅವರು, ಇಂತಹ ಘಟನೆ ಕಳೆದ 25 ವರ್ಷಗಳಲ್ಲಿ ನಡೆದಿಲ್ಲ. ಸುಮಾರು ನಾಲ್ಕು ಸಾವಿರ ಜನರು ಮನೆಗೆ ದಾಳಿ ನಡೆಸಿದರು. ಮಾರಕಾಸ್ತ್ರ ಪೆಟ್ರೋಲ್ ಬಾಂಬ್ ಬಳಸಿ ಮನೆಗೆ ಬೆಂಕಿ ಹಾಕುವ ಯತ್ನ ಮಾಡಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ. ಯಾರೇ ಆದರೂ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಸಚಿವ ಅಶೋಕ್ ಮನೆಗೆ ಬಂದು ನಮಗೆ ಧೈರ್ಯ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನವೀನ್ ನನ್ನ ಅಕ್ಕನ ಮಗನಾಗಿದ್ದು ಅವನಿಗೆ ನಮಗೆ ಯಾವುದೇ ಸಂಪರ್ಕವಿಲ್ಲ ಎಂದು ಕೂಡಾ ಹೇಳಿದ್ದಾರೆ.