ಬೆಂಗಳೂರು, ಆ. 13 (DaijiworldNews/MB) : ಬೆಂಗಳೂರಿನಲ್ಲಿ ಮಂಗಳವಾರ ನಡೆದ ಗಲಭೆಗೆ ಸಂಬಂಧಿಸಿ ಈವರೆಗೆ 146 ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ''ಈ ಪ್ರಕರಣದ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ನಡೆಯಲಿದ್ದು ಈವರೆಗೆ 146 ಜನರನ್ನು ಬಂಧಿಸಲಾಗಿದೆ'' ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ಫೇಸ್ಬುಕ್ನಲ್ಲಿ ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದು ಈ ವಿಚಾರವಾಗಿ ಮಂಗಳವಾರ ರಾತ್ರಿ ಶ್ರೀನಿವಾಸಮೂರ್ತಿ ಅವರ ಮನೆಗೆ ಬಂದ 500 ಕ್ಕೂ ಅಧಿಕ ಮಂದಿಯ ಗುಂಪು ದಾಂಧಲೆ ನಡೆಸಿ ಮನೆ, ವಾಹನಗಳನ್ನೆಲ್ಲಾ ಸುಟ್ಟು ಹಾಕಿದ್ದರು.ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ನಿಂದಾಗಿ 3 ಮಂದಿ ಸಾವನ್ನಪ್ಪಿದ್ದು 10 ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ದೆ ಪಡೆಯುತ್ತಿದ್ದಾರೆ. 60 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಈ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್ನನ್ನು ಪೊಲೀಸರು ಮಂಗಳವಾರ ರಾತ್ರಿಯೇ ವಶಕ್ಕೆ ಪಡೆದಿದ್ದಾರೆ.
ಇನ್ನು ಪ್ರಕರಣ ನಡೆದ ಡಿ ಜೆ ಹಳ್ಳಿ ಹಾಗೂ ಕೆ ಜಿ ಹಳ್ಳಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ.