ನವದೆಹಲಿ, ಆ. 13 (DaijiworldNews/MB) : ''ಸ್ವದೇಶಿ ಎಂದರೆ ಎಲ್ಲಾ ವಿದೇಶಿ ಉತ್ಪನ್ನಗಳನ್ನು ಬಹಿಷ್ಕಾರ ಮಾಡುವುದು ಎಂದು ಅರ್ಥವಲ್ಲ. ದೇಶದಲ್ಲಿ ಲಭ್ಯವಿಲ್ಲದ ತಂತ್ರಜ್ಞಾನ ಅಥವಾ ವಸ್ತುಗಳನ್ನು ಆಮದು ಮಾಡಿಕೊಳ್ಳಬುಹುದು'' ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಬುಧವಾರ ವರ್ಚುವಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಕೊರೊನಾ ಹಿನ್ನೆಲೆ ಸ್ವಾವಲಂಬಿ ಮತ್ತು ಸ್ವದೇಶಿ ಉತ್ಪನ್ನಗಳ ಪ್ರಸ್ತುತತೆಯ ಕುರಿತಾಗಿ ಮಾತನಾಡಿದ ಅವರು, ''ಸ್ವಾವಲಂಬಿಯಾಗಿರುವ ದೇಶಗಳ ನಡುವೆ ಪರಸ್ಪರವಾದ ಸಹಕಾರ ಅತೀ ಮುಖ್ಯ. ಸ್ವದೇಶಿ ಎಂದರೆ ಸ್ಥಳೀಯವಾಗಿ ಉತ್ಪಾದಿಸಲ್ಪಡುವ ವಸ್ತುಗಳಿಗೆ ಉತ್ತೇಜನ ನೀಡುವುದು. ಅದಕ್ಕಾಗಿ ಎಲ್ಲಾ ವಿದೇಶಿ ವಸ್ತುಗಳನ್ನು ಬಹಿಷ್ಕಾರ ಮಾಡಬೇಕಾಗಿಲ್ಲ. ನಮ್ಮಲ್ಲಿ ದೊರೆಯದ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲೇ ಬೇಕಾಗುತ್ತದೆ. ನಾವು ಮುಖ್ಯವಾಗಿ ದೇಶೀಯ ವಸ್ತುಗಳನ್ನು ಕೀಳಾಗಿ ಕಾಣುವ ಮಾನೋಭಾವವನ್ನು ಬದಲಾವಣೆ ಮಾಡಬೇಕು'' ಎಂದು ಹೇಳಿದರು.
''ಆರ್ಎಸ್ಎಸ್ ಸಿದ್ದಾಂತದಲ್ಲಿ ಸ್ಥಳೀಯ ಉತ್ಪನ್ನಗಳ ಉತ್ತೇಜನ ಹಾಗೂ ವಿದೇಶಿ ಹೂಡಿಕೆ, ಆಮದುಗಳನ್ನು ನಿರ್ಬಂಧಿಸುವ ಸ್ವದೇಶಿ ಪರಿಕಲ್ಪನೆ ಕಂಡು ಬರುತ್ತದೆ. ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನದಲ್ಲಿ ಇದರ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಮುಂಚೂಣಿಯಲ್ಲಿದೆ'' ಎಂದು ತಿಳಿಸಿದರು.
ಹಾಗೆಯೇ ಈ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕುರಿತಾಗಿ ಮಾತನಾಡಿದ ಅವರು, ''ಈ ರೀತಿಯ ನೀತಿಗಳು ಜನರಲ್ಲಿರುವ ಸಾಮರ್ಥ್ಯ ಹಾಗೂ ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಅರಿಯಲು ಸಹಾಯ ಮಾಡುತ್ತದೆ'' ಎಂದು ಹೇಳಿದರು.