ಬೆಂಗಳೂರು, ಆ 13 (DaijiworldNews/PY): ಪಿಎಫ್ಐ ಹಾಗೂ ಎಸ್ಡಿಪಿಐನಂತಹ ಸಂಘಟನೆಗಳ ನಿಷೇಧದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಯಾವುದೇ ಸಂಘನೆಗಳನ್ನು ನಿಷೇಧ ಮಾಡುವುದಕ್ಕೂ ಮೊದಲು ಒಂದು ವಿಧಾನವಿದೆ. ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ಸಂದರ್ಭವೂ ಪಿಎಫ್ಐ ಹಾಗೂ ಎಸ್ಡಿಪಿಐ ಕಾರಣವೆನ್ನುವ ಆರೋಪಗಳಿದ್ದವು. ಕಳೆದ ವರ್ಷ ಕಾಂಗ್ರೆಸ್ ಶಾಸಕ ತನ್ವೀರ್ ಸೇಟ್ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಸಂದರ್ಭವೂ ಪಿಎಫ್ಐ ಹಾಗೂ ಎಸ್ಡಿಪಿಐ ಸಂಘಟನೆಗಳ ಹೆಸೆರು ಕೇಳಿ ಬಂದಿತ್ತು. ಅಲ್ಲದೇ, ಅನೇಕರು ಇದನ್ನು ನಿಷೇಧ ಮಾಡುವಂತೆ ಕೋರಿದ್ದರು ಎಂದು ತಿಳಿಸಿದರು.
ವಿದ್ವಂಸಕ ಹಾಗೂ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ನಿಷೇಧಿಸಲು ಕಾನೂನಿನ ಅಡಿಯಲ್ಲಿರುವ ನಿಬಂಧನೆಗಳಲ್ಲಿ ಅವಕಾಶವಿದೆ. ಹಾಗಾಗಿ ಈ ವಿಚಾರದಲ್ಲಿ ನಾವು ಅದನ್ನು ಅನುಸರಿಸುತ್ತೇವೆ. ಸದ್ಯ ಬಂಧಿತರಲ್ಲಿ ಪದಾಧಿಕಾರಿಗಳು, ಸದಸ್ಯರು, ಪಿಎಫ್ಐ ಹಾಗೂ ಎಸ್ಡಿಪಿಐ ಬೆಂಬಲಿಗರು ಇದ್ದಾರೆ ಎಂದು ಹೇಳಿದರು.
ಡಿಜಿ ಹಾಗೂ ಐಜಿಪಿ ಪ್ರವೀಣ್ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಹಾಗೂ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಹಿಂಸಾಚಾರಕ್ಕೆ ಕಾರಣರಾದ ಯಾರನ್ನೂ ಬಿಡುವುದಿಲ್ಲ ಎಂದು ತಿಳಿಸಿದರು.