ನವದೆಹಲಿ, ಆ. 13 (DaijiworldNews/MB) : ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಚಿಕಿತ್ಸೆ ಮುಂದುವರಿದಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ನಿಮ್ಮೆಲ್ಲಾ ಪ್ರಾರ್ಥನೆಯಿಂದ ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ. ನನ್ನ ತಂದೆ ಶೀಘ್ರ ಗುಣಮುಖರಾಗುವಂತೆ ಎಲ್ಲರೂ ಪ್ರಾರ್ಥಿಸಬೇಕಾಗಿ ವಿನಂತಿ'' ಎಂದು ತಿಳಿಸಿದ್ದಾರೆ.
ಹಾಗೆಯೇ ''ನನ್ನ ತಂದೆ ಶ್ರೀ ಪ್ರಣಬ್ ಮುಖರ್ಜಿ ಇನ್ನೂ ಜೀವಂತವಾಗಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಊಹಾಪೋಹಗಳು ನಕಲಿ ಸುದ್ದಿಗಳು ಭಾರತದಲ್ಲಿ ಮಾಧ್ಯಮವು ನಕಲಿ ಸುದ್ದಿಗಳ ಕಾರ್ಖಾನೆಯಾಗಿ ಮಾರ್ಪಟ್ಟಿದೆ ಎಂಬುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ'' ಎಂದು ವದಂತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
84 ವರ್ಷದ ಪ್ರಣಬ್ ಮುಖರ್ಜಿ ಅವರಿಗೆ ಮಿದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದರಿಂದ ಸೋಮವಾರ ಸೇನೆಯ ರೀಸರ್ಚ್ ಆ್ಯಂಡ್ ರೆಫರಲ್ (ಆರ್ಆ್ಯಂಡ್ಆರ್) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅದಕ್ಕೂ ಮುನ್ನ ಕೊರೊನಾ ಪರೀಕ್ಷೆ ಮಾಡಿದಾಗ ಪಾಸಿಟಿವ್ ದೃಢಪಟ್ಟಿತ್ತು. ಶಸ್ತ್ರ ಚಿಕಿತ್ಸೆಯ ಬಳಿಕ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಹಾಗೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.
ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ, ''ಕಳೆದ ವರ್ಷ ಆಗಸ್ಟ್ 8 ರಂದು ನನ್ನ ತಂದೆ ಭಾರತ ರತ್ನವನ್ನು ಸ್ವೀಕರಿಸಿದ್ದು ಆ ದಿನ ನನಗೆ ಸಂತೋಷದ ದಿನವಾಗಿದೆ. ನಿಖರವಾಗಿ ಒಂದು ವರ್ಷದ ನಂತರ ಆಗಸ್ಟ್ 10 ರಂದು ಅವರು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ದೇವರು ತಂದೆಗೆ ಒಳಿತು ಮಾಡಲಿ. ಜೀವನದಲ್ಲಿ ಸಂತೋಷ ಹಾಗೂ ದುಃಖವನ್ನು ಸಮಾನವಾಗಿ ಸ್ವೀಕರಿಸುವಂತಹ ಶಕ್ತಿಯನ್ನು ದೇವರು ನನಗೆ ನೀಡಬೇಕು. ಎಲ್ಲರ ಕಾಳಜಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಸಲ್ಲಿಸುತ್ತೇನೆ'' ಎಂದು ಬುಧವಾರ ಭಾವುಕ ಟ್ವೀಟ್ ಮಾಡಿದ್ದರು.