ಹೈದರಾಬಾದ್, ಆ. 13 (DaijiworldNews/HR): ಹೈದರಾಬಾದ್ನ ಸುಭಾನ್ಪುರ್ ಪ್ರದೇಶದಲ್ಲಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯೊಬ್ಬಳು ತನ್ನ 2 ತಿಂಗಳ ಮಗುವನ್ನು 45 ಸಾವಿರ ರೂ. ಗೆ ಮಾರಾಟ ಮಾಡಿದ ಘಟನೆ ನಡೆದಿದೆ.
ಆಗಸ್ಟ್ 11 ರಂದು ಅಬ್ದುಲ್ ಮುಜಾಹೇದ್ ಎಂಬ ವ್ಯಕ್ತಿ ಹಬೀಬ್ ನಗರ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿ ಮಗುವನ್ನು ಮಾರಿರುವುದಾಗಿ ದೂರು ನೀಡಿದ್ದಾರೆ. ಮಗು ಮಾರಿದ ಮಹಿಳೆಯನ್ನು ಝೋಯಾ ಖಾನ್ ಎಂದು ಗುರುತಿಸಲಾಗಿದ್ದು, ಆಯೆಷಾ ಜಬೀನ್, ಶಮೀಮಾ ಬೇಗಂ ಹಾಗೂ ಸಿರಾಜ್ ಬೇಗಂ ಇತರ ಆರೋಪಿಗಳಾಗಿದ್ದಾರೆ.
ದೂರು ದಾಖಲಾಗುತ್ತಿದ್ದಂತೆಯೇ ಮಹಿಳೆ ಝೋಯಾ ಖಾನ್ ನನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆ ನಡೆಸಿದ ವೇಳೆ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಗಸ್ಟ್ 3ರಂದು ಮುಜಾಹೇದ್ ತನ್ನ ಪತ್ನಿಯೊದಿಗೆ ಜಗಳವಾಡಿ ಹೆತ್ತವರ ಮನೆಗೆ ತೆರಳಿದ್ದನು. ತನ್ನ ಪತಿಯ ವರ್ತನೆಯಿಂದ ಬೇಸರಗೊಂಡ ಝೋಯಾಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಗಿ ಮಗುವನ್ನು ಮಗುವನ್ನು 45 ಸಾವಿರಕ್ಕೆ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದೆ ಎಂದು ಪೊಲೀಸರ ಬಳಿ ತಿಳಿಸಿದ್ದಾಳೆ.
ದೂರಿನ ಮೇರೆಗೆ ಪೊಲಿಸರು ಚಂಚಲಗುಡದಲ್ಲಿರುವ ಆಯೆಷಾ ಮನೆಗೆ ತೆರಳಿ ಮಗುವನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇತರ ಆರೋಪಿಗಳೊಂದಿಗೆ ಮಹಿಳೆಯನ್ನು ಬಂಧಿಸಲಾಗಿದ್ದು, ಮಗುವನ್ನು ರಕ್ಷಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.