ಬೆಂಗಳೂರು, ಆ. 13 (DaijiworldNews/HR): ಈಗಾಗಲೇ ಅನೇಕ ಜನಪ್ರತಿನಿಧಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ಸೋಂಕು ತಗುಲಿದ ಬೆನ್ನಲ್ಲೇ ಅವರ ತಾಯಿ ಮತ್ತು ಸಹೋದರನಿಗೆ ಸೋಂಕು ದೃಢಪಟ್ಟಿದೆ.
ಬಳ್ಳಾರಿಯಲ್ಲಿದ್ದ ಸಚಿವರ ತಾಯಿ ಹೊನ್ನೂರಮ್ಮ (80) ಮತ್ತು ಸಹೋದರ ಶ್ರೀನಿವಾಸಲು (42) ಅವರಿಗೆ ಕೋವಿಡ್ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳ್ಳಾರಿಯಲ್ಲಿದ್ದ ಅವರ ತಾಯಿ ಮತ್ತು ಸಹೋದರನನ್ನು ತಕ್ಷಣ ಬೆಂಗಳೂರಿಗೆ ಕರೆತಂದು ಸಚಿವ ಶ್ರೀರಾಮುಲು ಅವರು ದಾಖಲಾಗಿರುವ ಬೌರಿಂಗ್ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸಚಿವರ ಆರೋಗ್ಯ ಸ್ಥಿರವಾಗಿದೆ ಮುಂಜಾಗ್ರತಾ ಕ್ರಮವಾಗಿ ವಿಶೇಷ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.