ಆಂಧ್ರಪ್ರದೇಶ, ಆ. 13 (DaijiworldNews/MB) : ಆಂಧ್ರಪ್ರದೇಶದ ಸೀತಾನಗರ ಪೊಲೀಸ್ ಠಾಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರ ಸೂಚನೆಯಂತೆ ದಲಿತ ಯುವಕನ ತಲೆ ಬೋಳಿಸಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಸಂತ್ರಸ್ಥ ಯುವಕ ಪ್ರಸಾದ್ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಗೆ ಬರೆದ ಪತ್ರಕ್ಕೆ ರಾಷ್ಟ್ರಪತಿಯವರು ಶೀಘ್ರವೇ ಸ್ಪಂಧಿಸಿ ಈ ಪ್ರಕರಣವನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ಹಸ್ತಾಂತರ ಮಾಡಿದ್ದಕ್ಕಾಗಿ ಯುವಕ ರಾಷ್ಟ್ರಪತಿ ಕೋವಿಂದ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಪ್ರಸಾದ್ ಅವರು, ನಾನು ಈ ಪ್ರಕರಣದಲ್ಲಿ ನನಗೆ ನ್ಯಾಯ ಒದಗಿಸುವಂತೆ ಕೋರಿ ರಾಷ್ಟ್ರಪತಿ ಕೋವಿಂದ್ ಅವರಿಗೆ ಮೇಲ್ ಮಾಡಿದ್ದು ಅವರು 24 ಗಂಟೆಗಳಲ್ಲಿ ಇದಕ್ಕೆ ಸ್ಫಂಧಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅಧಿಕಾರಿಗಳು ನನ್ನ ಬಳಿಗೆ ಬಂದು ನನಗೆ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ನನಗಿದೆ. ಆದರೆ ಎಲ್ಲೂರಿನ ಡಿಐಜಿ ಕೆ ವಿ ಮೋಹನ್ ರಾವ್ ಅವರು ಈ ಪ್ರಕರಣವನ್ನು ತಪ್ಪು ಹಾದಿಗೆ ತಿರುಚುವ ಯತ್ನ ಮಾಡುತ್ತಿದ್ದಾರೆ. ಅವರು ಈ ಪ್ರಕರಣವನ್ನು ಸಂಪೂರ್ಣವಾಗಿ ತಿರುಚಲು ಪೂರ್ಣ ಆರೋಪವನ್ನು ಪೊಲೀಸರ ಮೇಲೆ ಹೊರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ನಿಜವಾಗಿ ಡಿಐಜಿ ಅವರ ಮೇಲೆ ನನಗೆ ಸಹಾನುಭೂತಿ ಉಂಟಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಠಾಣೆಯ ಎಸ್ಐ ಅವರನ್ನು ಅಮಾನತು ಮಾಡಲಾಗಿದೆ. ಆದರೆ ನೈಜ್ಯವಾಗಿ ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ಅವರು ಎರಡು ದಿನಗಳ ಹಿಂದಷ್ಟೇ ಆ ಠಾಣೆಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದರು. ಅವರು ಕಾವಳ ಕೃಷ್ಣಮೂರ್ತಿ ಆದೇಶದಂತೆ ಈ ರೀತಿ ನನಗೆ ಹಲ್ಲೆ ನಡೆಸಿದ್ದಾರೆ. ವೈಎಸ್ಆರ್ಸಿಪಿ ಪಕ್ಷದ ಸಾಮಾನ್ಯ ನಾಯಕನ ಮಾತು ಅವರು ಕೇಳಬೇಕಾಗಿರಲಿಲ್ಲ. ಆದರೆ ಆ ಪಕ್ಷದ ಅದಕ್ಕಿಂತ ದೊಡ್ಡ ವ್ಯಕ್ತಿಗಳು ಈ ಹಲ್ಲೆ ನಡೆಸುವಂತೆ ಹೇಳಿದ್ದಾರೆ ಎಂದು ಹೇಳಿದ್ದಾರೆ.
ಜುಲೈ 21 ರಂದು ಪ್ರಸಾದ್ ಅವರ ಮೇಲೆ ಸೀತಾನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಲ್ಲೆ ನಡೆಸಿ ತಲೆ ಬೋಳಿಸಿದ್ದು ಇದರ ಹಿಂದೆ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಹಾಗೆಯೇ ಶಾಸಕರೊಬ್ಬರ ಆದೇಶದಂತೆ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ.