ನವದೆಹಲಿ, ಆ 13 (Daijiworld News/MSP): ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿ "ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಪಾತ್ರ"ವನ್ನು ಗುರುವಾರ ಒತ್ತಿಹೇಳಿದ್ದಾರೆ.
ಸರ್ಕಾರ ನೀತಿ ಆಧಾರಿತ ಆಡಳಿತ ಮಾದರಿಯನ್ನು ಅನುಸರಿಸುತ್ತಿದ್ದು, ದೇಶದಲ್ಲಿ ಸುಧಾರಣೆ ಹೊಸ ಹಂತಕ್ಕೆ ತಲುಪಿದೆ. ಇಂದಿನಿಂದ ಹೊಸ ಪ್ರಯಾಣ ಆರಂಭವಾಗಿದೆ. ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಪ್ರತಿ ನಿಯಮ-ಕಾನೂನು, ನೀತಿ ಜನರನ್ನು ಕೇಂದ್ರಿತ ಮತ್ತು ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲು ಒತ್ತು ನೀಡಲಾಗಿದೆ. ಇದು ಹೊಸ ಆಡಳಿತ ಮಾದರಿಯ ಬಳಕೆಯಾಗಿದೆ ಮತ್ತು ದೇಶವು ಅದರ ಫಲಿತಾಂಶಗಳನ್ನು ಪಡೆಯುತ್ತಿದೆ ಎಂದರು.
ಯಾವುದೇ ಕಾರಣಕ್ಕೂ ತೆರಿಗೆ ಪಾವತಿ ವಿಚಾರದಲ್ಲಿ ಅಡ್ಡದಾರಿ ಹಿಡಿಯಬೇಡಿ. ಈ ನಿಟ್ಟಿನಲ್ಲಿ ಪ್ರಾಮಾಣಿಕ ತೆರಿಗೆದಾರರ ಉತ್ತೇಜನಕ್ಕೆ ವೇದಿಕೆಗೆ ಚಾಲನೆ ನೀಡಲಾಗಿದೆ. ತೆರಿಗೆ ಪಾವತಿ ಮತ್ತಷ್ಟು ಜನಸ್ನೇಹಿ ಆಗಿದ್ದು ತೆರಿಗೆ ಪಾವತಿ ಸುಲಲಿತ ಮತ್ತು ಸುರಕ್ಷಿತವಾಗಿದೆ.
ಇಂದು ಆರಂಭವಾಗಿರುವ ಹೊಸ ನೀತಿ 'ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ' ಕಡೆಗೆ ನಮ್ಮ ಕನಸನ್ನು ಪ್ರತಿಬಿಂಬಿಸುತ್ತವೆ. ಪ್ರತಿಯೊಂದು ನಿಯಮ, ನಿಯಂತ್ರಣ ಮತ್ತು ನೀತಿಯನ್ನು ಪ್ರಕ್ರಿಯೆ ಮತ್ತು ಆಡಳಿತ ಕೇಂದ್ರಿತ ವಿಧಾನದಿಂದ ನಾಗರಿಕ ಕೇಂದ್ರಿತ ಮತ್ತು ಸಾರ್ವಜನಿಕ ಸ್ನೇಹಿಯಾಗಿ ಬದಲಾಯಿಸಲಾಗುತ್ತದೆ.
ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವ ಹೊಸ ಪ್ರಯಾಣವು ಇಂದು ಪ್ರಾರಂಭವಾಗಿದೆ. ದೇಶದ ಪ್ರಾಮಾಣಿಕ ತೆರಿಗೆದಾರರು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ತೆರಿಗೆ ವಂಚನೆ ಮಾಡುವುದು ನಿಮಗೆ ಮಾತ್ರವಲ್ಲ, ಅದು ದೇಶಕ್ಕೆ ದ್ರೋಹ ಬಗೆದಂತೆ ಎಂದು ಹೇಳಿದರು.