ಬೆಂಗಳೂರು, ಆ. 13 (DaijiworldNews/HR): ಮಂಗಳವಾರ ರಾತ್ರಿ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಬೆಂಕಿ ಹಚ್ಚಿ ದಾಂಧಲೆ ಮಾಡಿ ಪರಾರಿಯಾಗಿರುವವರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಗಲಭೆಯ ಸಂದರ್ಭದಲ್ಲಿ ತೆಗೆದ ವಿಡಿಯೋ ಆಧರಿಸಿ ಆರೋಪಿಗಳನ್ನು ಗುರುತಿಸಿ ಅವರ ಬಂಧನಕ್ಕೆ ಈ ತಂಡಗಳು ಮುಂದಾಗಿದ್ದು, ಈ ಮೂರು ತಂಡಗಳು ಪರಾರಿಯಾಗಿರುವ ಗಲಭೆಕೋರರ ಬಂಧನಕ್ಕೆ ಬಲೆ ಬೀಸಿವೆ.
ಈಗಾಗಲೇ 147ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ನಗರ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡಿವೆ.
ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಠಾಣೆಗಳಲ್ಲಿ ಗಲಭೆಕೋರರ ವಿರುದ್ಧ ಎಫ್ಐಆರ್ ದಾಖಲಾಗಿವೆ.
ಇನ್ನುಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಜೆ ಹಳ್ಳಿ ಎರಡೂ ಪೊಲೀಸ್ ಠಾಣೆಗಳಲ್ಲಿ 17 ಗಲಭೆಕೊರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇನ್ಸ್ಪೆಕ್ಟರ್ ಅಜಯ್ ಸಾರಥಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 143,147,148 ,353, 333, 323, 436, 427, 148 ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ-1984 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಬ್ಬಾಸ್A1, ಫಿರೋಜ್A2, ಮುಜಾಮಿಲ್A3, ಹಬೀಬ್ A4, ಪೀರ್ ಪಾಷಾA5 ಸೇರಿದಂತೆ 17 ಆರೋಪಿಗಳ ಹೆಸರು ನಮೂದಿಸಲಾಗಿದೆ. ಬಂಧಿತರು ಎಸ್ಡಿಪಿಐನವರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.