ನವದೆಹಲಿ, ಆ. 13 (DaijiworldNews/MB) : ಕೇಂದ್ರ ಸರ್ಕಾರವು ಎಲ್ಲಾ ನಾಗರಿಕರಿಗೆ 2021ರ ಪ್ರಾರಂಭದಲ್ಲಿ ಇ- ಪಾಸ್ ಪೋರ್ಟ್ ವಿತರಣೆಗೆ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.
2021ರ ಪ್ರಾರಂಭದಲ್ಲಿ ಭಾರತೀಯರು ಇ - ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದ್ದು ಈ ಯೋಜನೆಯ ಜಾರಿಗಾಗಿ ಕೇಂದ್ರ ಸರ್ಕಾರ ಐಟಿ ಮೂಲಸೌಕರ್ಯ ಸ್ಥಾಪನೆಗೆ ಸಂಸ್ಥೆಯೊಂದನ್ನು ಆಯ್ಕೆ ಮಾಡುತ್ತಿದೆ. ಪ್ರಾಯೋಗಿಕವಾಗಿ ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ 20 ಸಾವಿರ ಇ ಪಾಸ್ ಪೋರ್ಟ್ ವಿತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಮುದ್ರಿತ ಪಾಸ್ಪೋರ್ಟ್ ಬಳಸಲಾಗುತ್ತಿದ್ದು ಅಧಿಕಾರಿಗಳು ಮತ್ತು ರಾಜತಾಂತ್ರಿಕರಿಗೆ ಮಾತ್ರ ಪ್ರಾಯೋಗಿಕವಾಗಿ ಇ ಪಾಸ್ ಪೋರ್ಟ್ ವಿತರಣೆ ಮಾಡಲಾಗಿದೆ. ಇ - ಪಾಸ್ ಪೋರ್ಟ್ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಯ ಗುಣಮಟ್ಟಕ್ಕೆ ಅನುಗುಣವಾಗಿ ಇರಲಿದ್ದು ಇದರಲ್ಲಿ ಮೈಕ್ರೋಪ್ರೊಸೆಸರ್ ಚಿಪ್ ಇರಲಿದೆ. ಹಾಗೆಯೇ ಅತ್ಯಾಧುನಿಕ ಭದ್ರತಾ ಫೀಚರ್ಗಳು ಇರುತ್ತದೆ. ಇದರಿಂದಾಗಿ ನಾಗರಿಕರಿಗೆ ಸಹಾಯವಾಗಲಿದ್ದು ನಕಲಿ ಪಾಸ್ಪೋರ್ಟ್ ದಂದೆ ನಡೆಸುವವರಿಗೆ ಏಟು ಬೀಳಲಿದೆ.
ಪಾಸ್ ಪೋರ್ಟ್ ಮುದ್ರಣಕ್ಕಾಗಿ ಇಂಡಿಯನ್ ಸೆಕ್ಯೂರಿಟಿ ಪ್ರೆಸ್, ನಾಸಿಕ್ ಹಾಗೂ ನ್ಯಾಷನಲ್ ಇನ್ಫರ್ಮೆಟಿಕ್ಸ್ ಸೆಂಟರ್ ಗಳಲ್ಲಿ ಸಿದ್ದತೆ ನಡೆಸಲಾಗುತ್ತಿದ್ದು ದೆಹಲಿ, ಚೆನ್ನೈ ನಲ್ಲಿ ಐ.ಟಿ. ವ್ಯವಸ್ಥೆ ಕಲ್ಪಿಸಿ ಒಂದು ಗಂಟೆಯಲ್ಲಿ ಸುಮಾರು 10ರಿಂದ 20 ಸಾವಿರ ಇ - ಪಾಸ್ ಪೋರ್ಟ್ ವಿತರಣೆ ಘಟಕ ಸ್ಥಾಪಿಸಲಾಗುತ್ತದೆ. ಇನ್ನು ಎಲ್ಲಾ ಸಿದ್ದತೆಗಳು ಮುಗಿದ ಬಳಿಕ ಭಾರತದ ಎಲ್ಲ 36 ಪಾಸ್ ಪೋರ್ಟ್ ಕಚೇರಿಯಲ್ಲೂ ಇ ಪಾಸ್ ಪೋರ್ಟ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.