ನವದೆಹಲಿ, ಆ 13 (DaijiworldNews/PY): ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಅವರು ತೀವ್ರ ಪ್ರಜ್ಞಾಶೂನ್ಯ ಸ್ಥಿತಿ ತಲುಪಿದ್ದಾರೆ ಎಂದು ಆಸ್ಪತ್ರೆಯ ಉನ್ನತ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಆರ್ಮಿ ಆಸ್ಪತ್ರೆಯ ವೈದ್ಯರು, ಮಾಜಿ ರಾಷ್ಟ್ರಪತಿ ಅವರ ಆರೋಗ್ಯದಲ್ಲಿ ಇಂದು ಕೂಡಾ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅವರಿಗೆ ವೆಂಟಿಲೇಟರ್ ಬಳಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದ ಕಾರಣ ಅವರನ್ನು ಸೋಮವಾರ ಸೇನೆಯ ರೀಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅಲ್ಲದೇ ಶಸ್ತ್ರಚಿಕಿತ್ಸೆಗೂ ಮೊದಲು ಅವರಿಗೆ ಕೊರೊನಾ ಪರೀಕ್ಷೆ ಮಾಡಿದ ಸಂದರ್ಭ ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ತಂದೆಯ ಆರೋಗ್ಯದ ಸ್ಥಿತಿ ಬಗ್ಗೆ ಟ್ವೀಟ್ ಮಾಡಿದ ಪುತ್ರ ಅಭಿಜಿತ್ ಮುಖರ್ಜಿ ಅವರು, ನಿಮ್ಮೆಲ್ಲಾ ಪ್ರಾರ್ಥನೆಯಿಂದ ನನ್ನ ತಂದೆಯ ಆರೋಗ್ಯ ಸ್ಥಿರವಾಗಿದೆ. ನನ್ನ ತಂದೆ ಶೀಘ್ರ ಗುಣಮುಖರಾಗುವಂತೆ ಎಲ್ಲರೂ ಪ್ರಾರ್ಥಿಸಬೇಕಾಗಿ ವಿನಂತಿ ಎಂದು ತಿಳಿಸಿದ್ದಾರೆ.