ಕೊಪ್ಪಳ, ಆ. 13 (DaijiworldNews/HR): ಮಂಗಳವಾರ ರಾತ್ರಿ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆಯು ಪೂರ್ವ ನಿಯೋಜಿತ ಸಂಚಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ಗಲಭೆಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು ಕಾರಣವಾಗಿದೆ ಅದಕ್ಕೆ ನನ್ನ ವಿರೋಧವು ಇದೆ. ಅದಕ್ಕೆ ತಕ್ಕಂತೆ ಪೋಸ್ಟ್ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಆ ನೆಪದಲ್ಲಿ ಗಲಭೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇನ್ನು ಪೊಲೀಸ್ ಠಾಣೆ ಮುಂದೆ ಏಕಾಏಕಿ ಜನರು ಹೇಗೆ ಸೇರಿದ್ದರು ಮತ್ತು ಪೆಟ್ರೋಲ್ ಬಾಂಬ್ ಗಳು, ಕಲ್ಲುಗಳು ಎಲ್ಲಿಂದ ಬಂದಿವೆ. ಇವೆಲ್ಲ ಪೂರ್ವ ನಿಯೋಜಿತ ಸಂಚಾಗಿದೆ ಎಂದರು.
ಈ ಗಲಭೆಯಲ್ಲಿ ಎಸ್ ಡಿಪಿಐ, ಕೆಎಫ್ ಡಿ ಸಂಘಟನೆಯ ಕೈವಾಡ ಇದೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ, ಆದರೆ ಇವುಗಳ ನಿಷೇಧಕ್ಕೆ ಒತ್ತಾಯ ಮಾಡುತ್ತೇನೆ. ಇದರ ಹಿಂದೆ ಯಾರು ಇದ್ದಾರೆ ಎಂಬುದರ ತನಿಖೆ ಆಗಬೇಕು. ಸರಕಾರ ದೃಢವಾದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.