ಉತ್ತರ ಪ್ರದೇಶ, ಆ 13 (DaijiworldNews/PY): ತನ್ನ ನಿದ್ರಾಭಂಗ ಮಾಡಿದ್ದಕ್ಕಾಗಿ ಗೊರಕೆ ಹೊಡೆಯುತ್ತಿದ್ದ ತಂದೆಯನ್ನೇ ಮಗ ಕೊಡಲಿಯಿಂದ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರಾಮಸ್ವರೂಪ್ (65) ಎನ್ನಲಾಗಿದ್ದು, ಆರೋಪಿಯನ್ನು ನವೀನ್ (28) ಎನ್ನಲಾಗಿದೆ.
ರಾಮ್ ಸ್ವರೂಪ್ ಹೊಡೆಯುತ್ತಿದ್ದ ಸಂದರ್ಭ ಆತನ ಹಿರಿಯ ಮಗ ನವೀನ್ ಕೊಡಲಿಯಿಂದ ತಂದೆಯ ತಲೆಗೆ ಹೊಡೆದಿದ್ದಾನೆ. ತಕ್ಷಣವೇ ರಾಮ್ ಸ್ವರೂಪ್ ಅವರನ್ನು ಪುರಾಣಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತ್ತಾದರೂ, ಅಷ್ಟೊತ್ತಿಗಾಗಲೇ ಅವರು ಸಾವನ್ನಪ್ಪಿದ್ದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಘಟನೆಯ ಬಗ್ಗೆ ಅಣ್ಣನ ವಿರುದ್ದ ಮನೋಜ್ ಲಿಖಿತ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ನವೀನ್ನನ್ನು ಬಂಧಿಸಿದ್ದಾರೆ.
ವರದಿಯ ಪ್ರಕಾರ, ಈ ಘಟನೆಯ ಮಂಗಳವಾರ ರಾತ್ರಿ ಸೋಂಧಾ ಗ್ರಾಮದಲ್ಲಿ ನಡೆದಿದ್ದು, ಘಟನೆಯ ನಡೆದಂದು ರಾತ್ರಿ ಮನೋಜ್ ತಾಯಿಯೊಂದಿಗೆ ತನ್ನ ಚಿಕ್ಕಪ್ಪನ ಮನೆಯಲ್ಲಿದ್ದರು. ಗೊರಕೆ ಹೊಡೆಯುವ ಅಭ್ಯಾಸವಿದ್ದ ತಂದೆ ರಾಮ್ ಸ್ವರೂಪ್ ಅವರಿಗೆ ನವೀನ್ ನಿಂದನೆ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಸೆರಾಮೌ ಉತ್ತರ ವಲಯದ ಪೊಲೀಸ್ ಠಾಣಾಧಿಕಾರಿ ಪುಷ್ಕರ್ ಸಿಂಗ್ ತಿಳಿಸಿದ್ದಾರೆ.