ಕೇರಳ,ಆ. 13 (DaijiworldNews/HR): ಮಾಜಿ ಬಿಷಪ್ ಫ್ರಾಂಕೋ ಮುಲ್ಲಕ್ಕಲ್ ವಿರುದ್ಧ ಕ್ರಿಶ್ಚಿಯನ್ ಸನ್ಯಾಸಿನಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ರಚನೆಯಾಗಿದೆ. ಹೆಚ್ಚುವರಿ ಸೆಷನ್ಸ್ ಕೋರ್ಟ್ನಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ಅತ್ಯಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಈ ದೋಷಾರೋಪ ಪಟ್ಟಿ ಸಿದ್ದಪಡಿಸಲಾಗಿದ್ದು, ಮುಂದಿನ ವಿಚಾರಣೆ ಸೆಪ್ಟೆಂಬರ್ 16ರಂದು ನಡೆಯಲಿದೆ.
ಐಪಿಸಿಯ ವಿವಿಧ ಸೆಕ್ಷನ್ಗಳ ಪ್ರಕಾರ ಫ್ರಾಂಕೋ ಮುಲ್ಲಕ್ಕಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಫ್ರಾಂಕೋ ಮುಲ್ಲಕ್ಕಲ್ಗೆ ಕಳೆದ ವಾರ ಜಾಮೀನು ಮಂಜೂರಾಗಿತ್ತು. ಆದರೆ, ಇದಕ್ಕೆ ಕಠಿಣ ಷರತ್ತುಗಳನ್ನು ವಿಧಿಸಿದ್ದ ಕೋರ್ಟ್ ತಿಳಿಸಲಾದ ದಿನಾಂಕಗಳನ್ನು ವಿಚಾರಣೆ ಹಾಜರಾಗಬೇಕು ಎಂದು ನಿರ್ದೇಶನವನ್ನೂ ನೀಡಿತ್ತು. ಇದರಂತೆ, ಅವರು ಇಂದು ವಿಚಾರಣೆಗೆ ಹಾಜರಾಗಿದ್ದರು.
ಇದಕ್ಕಿಂತ ಮೊದಲು, ಮುಲ್ಲಕ್ಕಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿ ತನ್ನ ಮೇಲಿ ರೇಪ್ ಕೇಸ್ ಅನೂರ್ಜಿತಗೊಳಿಸುವಂತೆ ಕೋರಿದ್ದರು. ಆದರೆ, ಸುಪ್ರೀಂ ಕೋರ್ಟ್ ಅವರ ಮನವಿಯನ್ನು ಸ್ವೀಕರಿಸದೆ ವಿಚಾರಣೆ ಎದುರಿಸುವಂತೆ ಸೂಚಿಸಿತ್ತು.
2014ರಿಂದ 2016ರ ಅವಧಿಯಲ್ಲಿ ಬಿಷಪ್ ಆಗಿದ್ದ ಮುಲ್ಲಕ್ಕಲ್ ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಕೊಟ್ಟಾಯಂ ಪೊಲೀಸ್ ಠಾಣೆಯಲ್ಲಿ 2018ರ ಜೂನ್ ತಿಂಗಳಲ್ಲಿ ದೂರು ದಾಖಲಿಸಿದ್ದರು. ಬಳಿಕ ವಿಶೇಷ ತಂಡ ಬಿಷಪ್ ಅವರನ್ನು ಬಂಧಿಸಿತ್ತು.