ಕೋಲಾರ, ಆ 13 (DaijiworldNews/PY): ಪ್ರೀತಿಸುತ್ತಿದ್ದ ಜೋಡಿಯ ವಿವಾಹಕ್ಕೆ ಯುವತಿಯ ಕುಟುಂಬದವರು ನಿರಾಕರಿಸಿದ ಕಾರಣ ಯುವಕ ತನ್ನ ಪ್ರೇಯಸಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿದ ಘಟನೆ ಕೋಲಾರದ ಎಂಬಿ ರಸ್ತೆಯಲ್ಲಿ ನಡೆದಿದೆ.
ಕಿಲಾರಿಪೇಟೆಯ ಶಿವ ಎಂಬ ಯುವಕ ಕಳೆದ ಹಲವು ವರ್ಷಗಳಿಂದ ದೇವಾಂಗಪೇಟೆಯ ಸಿರಿಶಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಇಬ್ಬರ ಪ್ರೀತಿ ವಿಚಾರವನ್ನು ತಿಳಿದ ಸಿರಿಶಾ ಪೋಷಕರು ಇಬ್ಬರ ಪ್ರೀತಿಗೆ ನಿರಾಕರಿಸಿದ್ದಾರೆ.
ಪೋಷಕರೂ ನಿರಾಕರಿಸಿದರೂ ಕೂಡಾ ಯುವಕನಿಗೆ ಆಕೆಯನ್ನು ಬಿಟ್ಟು ಕೊಡಲು ಇಷ್ಟವಿರಲಿಲ್ಲ. ಈ ನಿಟ್ಟಿನಲ್ಲಿ ಆತ ಆಕೆಯನ್ನು ಅಪಹರಣ ಮಾಡಲು ಯೋಜಿಸಿದ್ದು, ಕೋಲಾರ ನಗರದ ಎಂಬಿ ರಸ್ತೆಯ ರೆಡ್ಡಿ ಎಲೆಕ್ಟ್ರಿಕಲ್ ಬಳಿ ಆಕೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಇನ್ನೋವಾ ಕಾರಿನಲ್ಲಿ ಬಂದ ಶಿವ ಯುವತಿಯನ್ನು ಅಪಹರಿಸಿದ್ದಾನೆ.
ಈ ವೇಳೆ ಯುವತಿಯೊಂದಿಗೆ ಇದ್ದ ಬಾಲಕಿ ಕೂಗಾಡಿದ್ದು, ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದರು. ಆದರೆ, ಆ ವೇಳೆಗಾಗಲೇ ಶಿವ ಯುವತಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ.
ಈ ದೃಶ್ಯ ರೆಡ್ಡಿ ಎಲೆಕ್ಟ್ರಿಕಲ್ನಲ್ಲಿ ಅಳವಡಿಸಿದ್ದ, ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.