ನವದೆಹಲಿ, ಆ 14 (Daijiworld News/MSP): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ನಿಧಾನವಾಗಿ ಚಿಕಿತ್ಸೆಗೆ ಗುರುವಾರದಿಂದ ಸ್ಪಂದಿಸತೊಡಗಿದ್ದಾರೆ ಎಂದು ಪ್ರಣಬ್ ಅವರ ಮಗ ಮಾಜಿ ಸಂಸದ ಅಭಿಜಿತ್ ಮುಖರ್ಜಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಗಸ್ಟ್ 10ರಂದು ತೀವ್ರ ಅನಾರೋಗ್ಯದಿಂದ ಕಾಣೀಸಿಕೊಂಡ ಹಿನ್ನಲೆಯಲ್ಲಿ ಪ್ರಣಬ್ ಮುಖರ್ಜಿ ಅವರನ್ನು ರಿಸರ್ಚ್ ಆಂಡ್ ರೆಫೆರೆಲ್ (ಆರ್ ಅಂಡ್ ಆರ್) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಳಿಕ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿ (Blood clot) ಸಮಸ್ಯೆ ಉದ್ಭವವಾಗಿತ್ತು. ತುರ್ತಾಗಿ ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಅದಾದ ಬಳಿಕ ಬ್ರೇನ್ ಸರ್ಜರಿ ಮಾಡಲಾಗಿತ್ತು.
ಬುಧವಾರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಣಬ್ ಆರೋಗ್ಯ ಗಂಭೀರವಾಗಿದೆ ಎಂದು ಹೇಳಿದ್ದರು. ಗುರುವಾರ ಅವರ ಸಾವಿನ ಬಗ್ಗೆ ವದಂತಿಗಳು ಸೃಷ್ಟಿಯಾಗಿ ಇದಕ್ಕೆ ಪುತ್ರ ಅಭಿಜಿತ್ ಸ್ಪಷ್ಟನೆ ನೀಡಿದ್ದರು.
ಇಂದು ಟ್ವೀಟ್ ಮಾಡಿರುವ ಮುಖರ್ಜಿ ಪುತ್ರ" ನನ್ನ ತಂದೆ ಯಾವಾಗಲೂ ಹೋರಾಟಗಾರ. ಅವರು ವೈದ್ಯಕೀಯ ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಅವರ ಅಂಗಾಂಗಗಳೆಲ್ಲವೂ ಸ್ಥಿರವಾಗಿದೆ. ನನ್ನ ತಂದೆಯ ಆರೋಗ್ಯದ ಶೀಘ್ರ ಚೇತರಿಕೆಗೆ ನಾವೆಲ್ಲರೂ ಪ್ರಾರ್ಥಿಸೋಣ, ನಮಗೆ ಅವರ ಅಗತ್ಯವಿದೆ" ಎಂದಿದ್ದಾರೆ