ಬೆಂಗಳೂರು, ಆ 14 (DaijiworldNews/HR): ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ನನ್ನೊಂದಿಗಿನ ಒಡನಾಟ ಬಹಳ ಚೆನ್ನಾಗಿದೆ. ನಾನು ಬಿಜೆಪಿಗೆ ಸೇರ್ಪಡೆಗೊಂಡು ಒಳ್ಳೆಯ ಕೆಲಸ ಮಾಡಿದ್ದೇನೆ ಹಾಗೂ ಇದರಿಂದ ತುಂಬಾ ಖುಷಿಯಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಜನರಿಗಾಗಿ ಅನೇಕ ಕೆಲಸ ಮಾಡುತ್ತಿದ್ದು, ಅವರ ಜೋತೆ ಅಭಿವೃದ್ಧಿಯ ಪತದಲ್ಲಿ ನಾವೆಲ್ಲ ಸೇರಿಕೊಂಡಿರುವುದೇ ಹೆಮ್ಮೆಯ ವಿಷಯವಾಗಿದೆ. 2024ರಲ್ಲೂ ಮತ್ತೆ ಮೋದಿ ಗೆದ್ದು ಪ್ರಧಾನಿಯಾಗುವುದು ಖಂಡಿತ. ಪ್ರಾದೇಶಿಕ ಪಕ್ಷಗಳ ಜೊತೆಗೆ ಸೇರಿಕೊಂಡು ಬಿಜೆಪಿಗೆ ಪೈಪೋಟಿ ನೀಡುವ ಶಕ್ತಿ ಈಗಲೂ ಕಾಂಗ್ರೆಸ್ ಪಕ್ಷಕ್ಕಿದೆ. ಆದರೆ, ಮೋದಿ ಗೆಲ್ಲುವುದನ್ನು ತಪ್ಪಿಸಲಾಗದು ಎಂದೂ ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಒಂದು ವಿಶಿಷ್ಟಶಕ್ತಿಯಿದೆ. ಪ್ರಧಾನಿ ಮೋದಿಯವರ ಸೂಕ್ಷ್ಮ ಚಿಂತನೆ, ಎಲ್ಲರಿಗೂ ಸ್ಪಂದಿಸುವ ಗುಣದಿಂದ ದೇಶದಲ್ಲೀಗ ಉತ್ತಮ ಆರ್ಥಿಕ ವಾತಾವರಣ ಮತ್ತು ರಾಜಕೀಯವಿದೆ. ಪ್ರಧಾನಿ ಅಥವಾ ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ಆರೋಪ ಮಾಡಲು ಬಂದವರೇ ಭ್ರಷ್ಟಾಚಾರಿಗಳಾಗಿದ್ದಾರೆ. ಮೋದಿಯವರು ದೇಶಕ್ಕಾಗಿ ನಿರ್ಧಾರ ಕೈಗೊಳ್ಳುವ ಮುನ್ನ ಸಾವಿರ ಬಾರಿ ಯೋಚಿಸಿ, ಬಹಳಷ್ಟುಜನರ ಸಲಹೆ ಕೇಳುತ್ತಾರೆ. ಆದರೆ, ಕೊನೆಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ಎಲ್ಲಾದರೂ ತಪ್ಪಾದರೆ ಅವರು ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿದರು.
ಮಹತ್ಮ ಗಾಂಧಿ, ನೇತಾಜಿ, ಸುಭಾಷ್ ಚಂದ್ರ ಬೋಸ್ರ ಕಾಲದಲ್ಲಿದ್ದ ಆಂತರಿಕ ಪ್ರಜಾಪ್ರಭುತ್ವ ನಮಗೆ ಬೇಕಿದ್ದು, ಅದನ್ನು ಮಾದರಿಯಾಗಿಟ್ಟುಕೊಂಡು, ಬದಲಾದ ಕಾಲಕ್ಕೆ ತಕ್ಕಂತೆ ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಜಾಗ ಮಾಡಿಕೊಡಬೇಕಿದೆ ಎಂದೂ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.