ಬೆಂಗಳೂರು, ಆ 14 (Daijiworld News/MSP): ರಾಜ್ಯದಲ್ಲಿ ನಾಲ್ಕು ಕೊರೊನಾ ಆಸ್ಪತ್ರೆಗಳನ್ನು ತೆರೆಯುವುದಾಗಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಘೋಷಿಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಶ್ರಮಿಸುತ್ತಿದ್ದು, ಸರ್ಕಾರದೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿರುವ ರಾಜ್ಯ ವಕ್ಫ್ ಬೋರ್ಡ್ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಾಲ್ಕು ಕಡೆ ಕೊವೀಡ್ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಡವರಿಗೆ ಸಮರ್ಪಕವಾಗಿ ಚಿಕಿತ್ಸೆ ಹಾಗೂ ಹಾಸಿಗೆಯೂ ಲಭ್ಯವಾಗುತ್ತಿಲ್ಲ. ಹೀಗಾಗಿ ಬಡ ಜನರಿಗಾಗಿ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಮಾಡಲು ವಕ್ಫ್ ಬೋರ್ಡ್ ಅಧೀನದಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಕೊರೊನಾ ಆಸ್ಪತ್ರೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ವಕ್ಫ್ ಬೋರ್ಡ್ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಡಾ.ಅನ್ವರ್ ಬಾಷ ಮಾಹಿತಿ ನೀಡಿದ್ದಾರೆ.
ಇನ್ನು ವಕ್ಫ್ ಬೋರ್ಡ್ ನಿರ್ಧಾರಕ್ಕೆ ಶಾಸಕ ಎನ್ ಎ ಹ್ಯಾರಿಸ್ ಬೆಂಬಲ ವ್ಯಕ್ತಪಡಿಸಿದ್ದು ರೂ. 50 ಲಕ್ಷ ನೆರವನ್ನೂ ಆಸ್ಪತ್ರೆ ನಿರ್ಮಾಣಕ್ಕೆ ಘೋಷಣೆ ಮಾಡಿದ್ದಾರೆ.