ದೆಹಲಿ, ಆ 15(DaijiworldNews/HR): ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯ ಇಂದು ಕೂಡ ಸ್ಥಿರವಾಗಿದೆ ಎಂದು ಆರ್ಮಿ ಆಸ್ರ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿ ಅವರನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದ್ದು ಅವರಿಗೆ ವೆಂಟಿಲೇಟರ್ ಬಳಸಿ ಚಿಕಿತ್ಸೆಯನ್ನು ಕೊಡಲಾಗುತ್ತಿದೆ. ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ನಡೆಯುತ್ತಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆದುಳಿನಲ್ಲಿ ರಕ್ತಹೆಪ್ಪುಗಟ್ಟಿದ್ದ ಕಾರಣ ಅವರನ್ನು ಸೋಮವಾರ ಆರ್ಮಿ ರೀಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅಲ್ಲದೇ ಶಸ್ತ್ರಚಿಕಿತ್ಸೆಗೂ ಮೊದಲು ಅವರಿಗೆ ಕೊರೊನಾ ಪರೀಕ್ಷೆ ಮಾಡಿದ ಸಂದರ್ಭ ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು, ಸ್ವಾತಂತ್ರ್ಯ ದಿನಾಚರಣೆಯಂದು ಹಿಂದಿನಿಂದಲೂ ತಂದೆ ಮತ್ತು ಚಿಕ್ಕಪ್ಪ ಹಳ್ಳಿಯ ನಮ್ಮ ಪೂರ್ವಜರ ಮನೆಯಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸುತ್ತಿದ್ದರು. ಅಂದಿನಿಂದ, ಅವರು ಸ್ವಾತಂತ್ರ್ಯ ದಿನದಂದು ಧ್ವಜ ಹಾರಿಸಲು ಒಂದು ವರ್ಷವನ್ನು ತಪ್ಪಿಸಲಿಲ್ಲ. ಈ ವರ್ಷ ಆರೋಗ್ಯದ ತೊಂದರೆಯಿಂದ ಆಗಲಿಲ್ಲ ಆದರೆ ಮುಂದಿನ ಖಂಡಿತ ಸ್ವತಂತ್ರ್ಯ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಇವತ್ತು ಆರೋಗ್ಯವಾಗಿದ್ದರೆ ಅವರು ಉತ್ಸಾಹದಿಂದ ತ್ರಿವರ್ಣ ಧ್ವಜ ಹಾರಿಸುತ್ತಿದ್ದರು ಎಂದು ಟ್ವೀಟ್ ಮಾಡಿದ್ದಾರೆ.