ನವದೆಹಲಿ, ಆ (DaijiworldNews/HR): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಪ್ರಣಬ್ ಅವರ ಮಗ ಮಾಜಿ ಸಂಸದ ಅಭಿಜಿತ್ ಮುಖರ್ಜಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು. ದೆಹಲಿಯ ಸೇನಾ ರೆಫರಲ್ ಆಸ್ಪತ್ರೆಯಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ತಂದೆ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡುಬಂದಿದೆ.
ಅವರ ಆರೋಗ್ಯ ಇದೀಗ ಸ್ಥಿರವಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ದೇವರ ದಯೆ ಮತ್ತು ನಿಮ್ಮೆಲ್ಲರ ಹಾರೈಕೆಯಿಂದ ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 10ರಂದು ತೀವ್ರ ಅನಾರೋಗ್ಯದಿಂದ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಣಬ್ ಮುಖರ್ಜಿ ಅವರನ್ನು ರಿಸರ್ಚ್ ಆಂಡ್ ರೆಫೆರೆಲ್ (ಆರ್ ಅಂಡ್ ಆರ್) ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬಳಿಕ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಸಮಸ್ಯೆ ಉದ್ಭವವಾಗಿತ್ತು. ತುರ್ತಾಗಿ ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಅದಾದ ಬಳಿಕ ಬ್ರೇನ್ ಸರ್ಜರಿ ಮಾಡಲಾಗಿತ್ತು. ಇದೀಗ ಕೃತಕ ಉಸಿರಾಟ ವ್ಯವಸ್ಥೆ (ವೆಂಟಿಲೇಟರ್) ಅಳವಡಿಸಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.